ಅಂಗಡಿ ಮಾಲೀಕರಿಂದ ಅಭಿಯಾನಕ್ಕೆ ಸಕಾರಾತ್ಮಕ ಸ್ಪಂದನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯ, ಮನೋರಂಜನಾ ಕೇಂದ್ರಗಳು ಮತ್ತು ಹೊಟೇಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಭಾಷೆಯ ಶೇ.೬೦ರಷ್ಟು ಕನ್ನಡ ನಾಮಪಲಕ ಅಳವಡಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳೂ ಒಳಗೊಂಡಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ವಿವಿಧ ಅಂಗಡಿಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿ ಶೇ. ೬೦% ರಷ್ಟು ನಾಮಫಲಕಗಳನ್ನು ಅಳವಡಿಸುವ ಕುರಿತು ತಿಳುವಳಿಕೆ ನೀಡಲಾಯಿತು.
ಬೆಳಿಗ್ಗೆ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯ ಆವರಣದಿಂದ ಜಾಗೃತಿ ಅಭಿಯಾನ ಕಾರ್ಯಯಕ್ರಮವು ಆರಂಭಗೊಂಡಿತು. ಅಭಿಯಾನವು ಗಾಂಧಿ ವೃತ್ತದ ವರೆಗೂ ನಡೆಯಿತು.
ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿನ ವಿವಿಧ ಅಂಗಡಿ ಮುಂಗಟ್ಟುಗಳು ಕಡ್ಡಾಯವಾಗಿ ಕನ್ನಡ ನಾಮ ಫಲಕಗಳನ್ನು ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಸರ್ಕಾರದ ಆದೇಶದಂತೆ ನಾಮಫಲಕಗಳು ಶೇ.೬೦ ರಷ್ಟು ಕನ್ನಡ ಭಾಷೆಯನ್ನೊಳಗೊಂಡಿರಬೇಕು. ಶೇ.೪೦ ರಷ್ಟು ಉಳಿದ ಭಾಷೆಗಳನ್ನು ಬಳಸಬಹುದಾಗಿದೆ ಎಂದು ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಯಿತು.
ಕಡ್ಡಾಯವಾಗಿ ಕನ್ನಡದಲ್ಲಿ ಶೇ. ೬೦% ರಷ್ಟು ನಾಮಫಲಕಗಳನ್ನು ಅಳವಡಿಸುವ ಕುರಿತು ಅಕ್ಟೋಬರ್ ೩೧ರೊಳಗೆ ಅನುಷ್ಠಾನಕ್ಕೆ ತರಬೇಕೆಂದು ತಿಳಿಸಲಾಯಿತು.ಕನ್ನಡ ಭಾಷೆ ನಾಮಫಲಕ ಒಳಗೊಳ್ಳದ ಅಂಗಡಿ, ಸಂಸ್ಥೆಗಳ ಮೇಲೆ ಕ್ರಮ ವಹಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅವರು ಹೇಳಿದರು.
ಕನ್ನಡ ನಾಮಫಲಕ ನಿಯಮಗಳ ಉಲ್ಲಂಘನೆಗಾಗಿ ಯಾವುದೇ ಕೈಗಾರಿಕಾ, ಅಂಗಡಿ, ವಾಣಿಜ್ಯ ಸಂಸ್ಥೆಯ ಮಾಲೀಕರಿಗೆ ಮೊದಲನೇ ಅಪರಾಧಕ್ಕಾಗಿ ರೂ.ಐದು ಸಾವಿರ ದಂಡ, ನಂತರದ ಎರಡನೇ ಅಪರಾಧಕ್ಕಾಗಿ ರೂ.ಹತ್ತು ಸಾವಿರದವರೆಗೆ ವಿಸ್ತರಿಸಬುಹುದಾದ ದಂಡ, ನಂತರ ಪ್ರತಿಯೊಂದು ಅಪರಾಧಕ್ಕಾಗಿ ರೂ.ಇಪ್ಪತ್ತು ಸಾವಿರದರವಗೆ ಜುಲ್ಮಾನೆ ಮತ್ತು ಪರವಾನಿಗೆ ರದ್ದುಪಡಿಸಲು ಅವಕಾಶವಿದೆ ಎಂದು ಜಾಗೃತಿ ಮೂಡಿಸಲಾಯಿತು.
ಈ ವೇಳೆ ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮಾಲೀಕರಿಗೆ ನೋಟೀಸ್ ನೀಡಿ ಅಕ್ಟೋಬರ್ ೩೧ ರೊಳಗೆ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ನಾಮ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.೬೦ಕ್ಕೂ ಹೆಚ್ಚು ಬಳಸಿದ ಅಂಗಡಿ ಮಾಲೀಕರಿಗೆ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಗುಣಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಬಿ ಕುಂಬಾರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಎನ್‌ಐಸಿ ಅಧಿಕಾರಿ ಶಿವಾನಂದ ಗೂಗವಾಡ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪುಂಡಲಿಕ ಮಾನವರ,ಕಾರ್ಮಿಕ ಇಲಾಖೆಯ ಅಧಿಕಾರಿ ಉಮಾಶ್ರೀ ಕೊಳ್ಳಿ, ಹೆಸ್ಕಾಂ ಅಧೀಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ, ಆಹಾರ ಇಲಾಖೆಯ ಉಪ ನಿರ್ದೇಶಕರಾದ ವಿನಯಕುಮಾರ ಪಾಟೀಲ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿಲ್ಲಾಧಿಕಾರ ಕಚೇರಿಯ ಶಿರಸ್ತೇದಾರರಾದ ಸಲೀಂ ಬಿಜಾಪೂರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ದ್ರಾಕ್ಷಾಯಿಣಿ ಹುಡೇದ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಹಾಸಿಂಪೀರ ವಾಲೀಕಾರ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ, ಫಯಾಜ ಕಲಾದಗಿ, ಅಭಿಷೇಕ ಚಕ್ರವರ್ತಿ, ರಾಜೇಶ್ವರಿ ಮೋಪಗಾರ, ದೇವೇಂದ್ರ ಮೀರೆಕರ, ಭೀಮರಾಯ ಜಿಗಜಿಣಗಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಯ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

