ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದಲ್ಲೇ ರೈತರು ಹಾಗೂ ಸಹಕಾರಿ ಹಿತರಕ್ಷಣೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇದ್ದರೂ ಸಹಕಾರಿ ಬಲವರ್ಧನೆಗೆ ಆದ್ಯತೆ ನೀಡುತ್ತಿರುವುದು ರಾಜ್ಯದ ರೈತರ ಸೌಭಾಗ್ಯ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಬಣ್ಣಿಸಿದರು.
ಭಾನುವಾರ ರಾತ್ರಿ ವಿಜಯಪುರ ತಾಲೂಕಿನ ಜಂಬಗಿ(ಆ) ಗ್ರಾಮದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಸಭಾಭವನ ಲೋಕಾರ್ಪಣೆ ಮಾಡಿ, ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಷ್ಟ್ರೀಕೃತ ಬ್ಯಾಂಕ್ ಗಳು ರೈತಸ್ನೇಹಿಯಲ್ಲ. ಹೀಗಾಗಿ ಕೃಷಿ, ರೈತ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರುವ ಸಹಕಾರಿ ರಂಗವನ್ನು ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಹಕಾರಿ ಸಂಸ್ಥೆಗಳು ಬದುಕಿದ್ದರೆ ರೈತನೂ ಬದುಕಿರುತ್ತಾನೆ, ಇಲ್ಲವಾದರೆ ರೈತ ಹಾಗೂ ಸಹಕಾರಿ ರಂಗ ಎರಡೂ ಅಸ್ತಿತ್ವ ಕಳೆದುಕೊಳ್ಳುತ್ತವೆ.
ಸಹಕಾರಿ ವ್ಯವಸ್ಥೆ ಬದುಕಿದ್ದರಿಂದಲೇ ರಾಜ್ಯ ಸರ್ಕಾರ ಮೂರು ಬಾರಿ ಕೃಷಿ ಸಾಲ ಮನ್ನಾ ಮಾಡಿದಾಗ ಲಕ್ಷಾಂತರ ರೈತರಿಗೆ ಅದರ ಲಾಭ ದಕ್ಕಲು ಸಾಧ್ಯವಾಗಿದೆ. ಹೀಗಾಗಿ ಗ್ರಾಮೀಣ ಜನರು, ರೈತರ ಪಾಲಿಗೆ ಕಾಮಧೇನು, ಕಲ್ಪವೃಕ್ಷದಂತಿರುವ ಸಹಕಾರಿ ರಂಗದ ಹಿತರಕ್ಷಣೆ, ಸಂರಕ್ಷಣೆಗೆ ಪ್ರತಿಯೊಬ್ಬರೂ ಕಟಿಬದ್ದರಾಗಿ ಇರಬೇಕು ಎಂದು ಕಿವಿ ಮಾತು ಹೇಳಿದರು.
ಹಾಗಂತ ಭವಿಷ್ಯದಲ್ಲಿ ಸಹಕಾರಿ ಕೃಷಿ ಸಾಲ ಮನ್ನಾ ಆಗುತ್ತದೆ ಎಂಬ ನಿರೀಕ್ಷೆ ಇಲ್ಲ. ಪ್ರಸಕ್ತ ಸಂದರ್ಭದಲ್ಲಿ ಯಾವುದೇ ಸರ್ಕಾರ, ಮುಖ್ಯಮಂತ್ರಿಗೆ ಅಂಥ ಶಕ್ತಿ ಬರುವುದು ಅನುಮಾನ. ಹೀಗಾಗಿ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯದ ಸದ್ಬಳಕೆ ಮಾಡಿಕೊಂಡು ಸಹಕಾರಿ ರಂಗವನ್ನು ಸಂರಕ್ಷಿಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಸಹಕಾರಿ ಬ್ಯಾಂಕುಗಳು ನೀಡುತ್ತಿದ್ದ ಕೃಷಿ ಸಾಲಕ್ಕೆ 16 ರಷ್ಟು ಬಡ್ಡಿ ಆಕರಿಸಲಾಗುತ್ತಿತ್ತು. ಆದರೆ ಕಾಲಕಾಲಕ್ಕೆ ಸರ್ಕಾರಗಳು ಸಾಲದ ಬಡ್ಡಿ ಕಡಿಮೆ ಮಾಡುತ್ತ ಬಂದಿದ್ದು, ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಈ ಹಿಂದೆ ಜಂಬಗಿ ಜೊತೆ ನಾಗಠಾಣ ಸಹಕಾರಿ ಸಂಘವೂ ಆಡಳಿತ ವೈಫಲ್ಯದ ಪರಿಣಾಮ ಆರ್ಥಿಕ ದುಸ್ಥಿತಿ ತಲುಪಿ ಮುಚ್ಚಿಹೋಗಿತ್ತು. ಆದರೆ ಆಗಿರುವ ತಪ್ಪು ತಿದ್ದಿಕೊಂಡು ನಾಗಠಾಣ ಸೊಸೈಟಿ ಅಭಿವೃದ್ಧಿಯಲ್ಲಿ ನಿಮಗಿಂತ ನೂರು ಮೈಲಿ ದೂರಸಾಗಿದೆ. ನೀವೂ ಸಹಕಾರಿ ತತ್ವ ಪಾಲನೆಯ ಬದ್ಧತೆ ತೋರಿದರೆ ಭವಿಷ್ಯದಲ್ಲಿ ಅತ್ಯುನ್ನತ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದು ಮಾರ್ಗದರ್ಶನ ನೀಡಿದರು.
ಗುರುಬಸಯ್ಯ ಹಿರೇಮಠ, ಸಿದ್ದರಾಮಯ್ಯ ಆಲಗೋಡ ಸಾನ್ನಿಧ್ಯ ವಹಿಸಿದ್ದ ಸಮಾರಂಭದಲ್ಲಿ ಸೊಸೈಟಿ ಅಧ್ಯಕ್ಷ ಮಹಾಂತರಾವ್ ದೇಶಮುಖ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ವಿಠ್ಠಲ ಕಟಕಧೋಂಡ, ಶ್ರೀಮಂತರಾವ್ ದೇಶಮುಖ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಸುರೇಶಗೌಡ ಬಿರಾದಾರ, ಚಂದ್ರಶೇಖರ ಪಾಟೀಲ ಮನಗೂಳಿ, ಸಿಇಒ ಎಸ್.ಎ. ಢವಳಗಿ, ಡಿಜಿಎಂ ಎಂ.ಜಿ. ಬಿರಾದಾರ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಪೀರಗೊಂಡ ಗದ್ಯಾಳ, ಗ್ರಾ.ಪಂ. ಅಧ್ಯಕ್ಷ ಮಹ್ಮದ ಪೈಗಂಬರ್ ಮುಲ್ಲಾ, ಸಾಬು ಸಿದ್ರಾಮ ಗೌಡನ್ನವರ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

