ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವ್ಯವಸ್ಥಿತ ಚರಂಡಿ ಇರದ ಕಾರಣ ಮಲೀನ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಕೂಡಲೇ ಸಿ.ಸಿ ರಸ್ತೆ, ಚರಂಡಿ ನಿರ್ಮಿಸುವುದರ ಜೊತೆಗೆ ಮುಳ್ಳಿನ ಗಿಡಗಳನ್ನು ತೆರವು ಗೊಳಿಸಲು ೧೧ನೇ ವಾರ್ಡಿನ ಬಸವನಗರ ನಿವಾಸಿಗಳು ಆಗ್ರಹಿಸಿದ್ದಾರೆ.
ಪಟ್ಟಣದ ೧೧ ನೇ ವಾರ್ಡಿನಲ್ಲಿ ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಕರ್ನಾಟಕ ತೈಲ ವಿತರಣಾ ಕೇಂದ್ರ (ಪಟ್ರೋಲ್ ಪಂಪ್)ದ ಹಿಂದುಗಡೆ ಪ್ರದೇಶದಲ್ಲಿ ಅವ್ಯವಸ್ಥೆ ತಲೆದೋರಿದ್ದು ಪಟ್ಟಣ ಪಂಚಾಯಿತಿಯಿಂದ ಅಸ್ಪೃಶ್ಯತೆಗೆ ಒಳಗಾಗಿದೆ. ಈ ಕುರಿತು ವಾರ್ಡಿನ ನಿವಾಸಿಗಳಾದ ಡಾ.ಮಂಜುನಾಥ ಮಠ ಹಾಗೂ ಯೂಸೂಫ್ ಮಹಮ್ಮದ್ ಅಲಿ ಹೇಳುವಂತೆ, ನಮ್ಮ ಕಾಲೊನಿಗೆ ಉತ್ತಮವಾದ ಮುಖ್ಯ ರಸ್ತೆ, ಚರಂಡಿಯಿಲ್ಲದೇ ಬಳಲುತ್ತಿದೆ. ಈ ಕುರಿತು ಪಟ್ಟಣ ಪಂಚಾಯಿತಿಯಲ್ಲಿ ಕೇಳಲಾಗಿ ಅನುದಾನದ ಕೊರತೆಯ ಕಾರಣ ನೀಡಲಾಗುತ್ತಿದೆ. ಹಾಗಿದ್ದರೇ ಪಟ್ಟಣ ಪಂಚಾಯಿತಿಯಡಿ ಅನುಮತಿ ಪಡೆದ ಕಾಲೊನಿಗೆ ರಸ್ತೆ, ಚರಂಡಿಯಂತಹ ಅಭಿವೃದ್ಧಿ ಕಾರ್ಯಗಳು ಬೇಡವೇ? ಇಲ್ಲಿಯ ನಿವಾಸಿಗಳು ಕರ, ತೆರಿಗೆಯನ್ನು ಪ್ರತಿ ವರ್ಷ ಸಂದಾಯ ಮಾಡುತ್ತಿಲ್ಲವೇ? ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿ, ಈ ಕುರಿತು ಪತ್ರಿಕೆಗಳು ಹಲವು ಬಾರಿ ವರದಿ ನೀಡಿ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿಗೆ ಪ್ರತಿವರ್ಷ ಕರಸಂಗ್ರಹವಾಗುತ್ತಿದೆ ಹಾಗೂ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ. ಜೊತೆಗೆ ಪಂಚಾಯಿತಿಗೆ ಉತ್ಸಾಹಿ ಸದಸ್ಯರು ಆಯ್ಕೆಯಾಗಿದ್ದಾರೆ. ಆದ್ದರಿಂದ ಸ್ಥಳೀಯ ಆಡಳಿತ ಇನ್ನಾದರೂ ೧೧ನೇ ವಾರ್ಡಿನ ಸಮಸ್ಯೆಗಳಿಗೆ ಸ್ಪಂದಿಸಿ ರಸ್ತೆ, ಚರಂಡಿ ನಿರ್ಮಿಸಬೇಕು. ಮುಳ್ಳು ಗಿಡಗಳ ತೆರವುಗೊಳಿಸುವುದರ ಮೂಲಕ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಮುಂದಾಗಬೇಕು ಎಂದು ವಾರ್ಡಿನ ನಿವಾಸಿಗಳಾದ ರಾಮಣ್ಣ ಬಜಂತ್ರಿ, ಶಿಕ್ಷಕರಾದ ತಾವರಖೇಡ, ಹೊಸಳ್ಳಿ ದಸ್ತಗೀರ್ ಮುಲ್ಲಾ, ವಾಸೀಮ್ ಚಟ್ಟರಕಿ, ಮಕೂಬೂಲ್ ಬಾಗವಾನ, ವಿನೋದ ಉತ್ನಾಳ, ಗುಂಡು ಹಂದಿಗನೂರ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

