ಚಂದಿರನೂರಿಗೆ ಹೋಗುವ ಬಯಕೆ
ಕಾಡಿತೆ ನಿನಗೇ ಹೇಳೆ ಸಖಿ
ಚಂದ್ರಿಕೆ ಮೀರಿಸೋ ಚಂದವು ನಿನ್ನಲೇ
ಇರುವುದ ಕಾಣೆಯಾ ಚಂದ್ರಮುಖಿ// //
ಚಂದ್ರಿಕೆ ಚೆಲುವದು ಇರುಳಿಗೆ ಸೀಮಿತ
ಎಲ್ಲರು ಬಲ್ಲರು ಜಗದೊಳಗೆ
ಹಗಲಿರುಳಲ್ಲೂ ಬೆಳದಿಂಗಳ ಸವಿ
ಕಂಡೆನು ನಿನ್ನಯ ನಗೆಯೊಳಗೆ// //
ಶರಧಿಯ ಅಲೆಗಳು ನರ್ತನ ಮಾಡಲು
ಹುಣ್ಣಿಮೆ ಕಾರಣ ಕೇಳೇ ಸಖಿ
ಸಂತಸದಲೆಗಳು ಬಾಳಲಿ ಮೂಡಲು
ಒಲವೇ ಕಾರಣ ಹೃದಯಸಖಿ// //
ತಾರೆಗಳ ತೋಟದ ಹೂಗಳ.ನಡುವೆ
ಚಂದಿರನಾಟವು ಇಂದುಮುಖಿ
ಮನಸಿನ ತೋಟದ ಹೂವುಗಳೆಲ್ಲ
ನಿನಗೇ ಸಮರ್ಪಣೆ ಆತ್ಮಸಖಿ// //
ಪ್ರೇಮದ ಚಂದಿರ ಮನದಲಿ ಹೊಳೆದಿರೆ
ಬಾಳಲಿ ನೀನೇ ಪರಮಸುಖಿ
ಸುಖದುಃಖದಲಿ ಸಹಚಾರಿಣಿ ನೀ
ಆಗಿರೆ ನಾನೇ ನಿತ್ಯಸುಖಿ// //