ಬದುಕಿನ ಪಯಣದಲ್ಲಿ ಅನೇಕರು ನಮ್ಮೊಂದಿಗೆ ಬರುತ್ತಾರೆ- ಹೋಗುತ್ತಾರೆ. ಹೆತ್ತ ತಾಯಿಯ ಮಡಿಲಿನಿಂದ ಭೂಮಿತಾಯಿಯ ಒಡಲು ಸೇರುವವರೆಗೂ ಇರುವ ನಾಲ್ಕು ದಿನಗಳಲ್ಲಿ ನಮ್ಮ ಕುಟುಂಬದವರೂ ಸೇರಿದಂತೆ ನಾನಾ ತರಹದವರು ನಮ್ಮ ಲೈಫ಼ಲ್ಲಿ ಎಂಟ್ರಿ ಕೊಡುತ್ತಾರೆ ಹಾಗೂ ನಾವೂ ಅನೇಕರ ಜ಼ಿಂದಗಿಯಲ್ಲಿ ಜೀಕುತ್ತೇವೆ. ಇದುವರೆಗಿನ ನಿಮ್ಮ ನಿಮ್ಮ ಬಾಳಿನ ಫ಼್ಲಾಶ್ ಬ್ಯಾಕಿಗೆ ಹೋಗಿ ಸ್ವಲ್ಪ ನೆನಪು ಮಾಡಿಕೊಂಡಾಗ , ಉಸಿರಾರಂಭದಿಂದ ಉಸಿರಾರುವವರೆಗಿನ ನಿಮ್ಮ ದುನಿಯಾದಲ್ಲಿ ಎಷ್ಟು ಮಂದಿ ಜೊತೆಜೊತೆಯಾಗಿ ಬಂದಿದ್ದಾರೆ, ಹೆಜ್ಜೆ ಹೆಜ್ಜೆಗೂ ಸಾಥ್ ಕೊಟ್ಟಿದ್ದಾರೆ, ಕೈ ಹಿಡಿದು ನೆಡೆಸಿದ್ದಾರೆ, ಕೈಕೊಟ್ಟು ಹೋಗಿದ್ದಾರೆ ಎನ್ನುವ ಅರಿಥ್ ಮೆಟಿಕ್ ಕಣ್ಮುಂದೆ ಲೆಕ್ಕಾಚಾರ ಹಾಕಿ ತಕಧಿಮಿ ಹಾಡುತ್ತದೆಯಲ್ಲವೇ..!
ಪ್ರತಿಯೊಬ್ಬರ ಬಾಳಲ್ಲೂ ಬರೋರು ಹೋಗೋರು ಕಾಮನ್ ಬಿಡಿ. ಆದರೆ ನನ್ನ ಈ ಬರಹದ ಮೂಲ ಸೆಲೆ…. ; ನಮ್ಮ ಸ್ನೇಹ ಬಂಧನ, ಬಂದು-ಬಾಂಧವ್ಯಗಳಿಂದ ಕೆಲವರು ದೂರ ಹೋಗುವಾಗ ಏನನ್ನೂ ಹೇಳದೇ, ಯಾಕೆ ಎಂದು ತಿಳಿಸದೇ ಕಾರಣ ಕೊಡದೇ…. ಧಿಡೀರನೇ ಅಂತರ್ಧಾನವಾಗಿ ಬಿಡುವ ಬಗ್ಗೆ…! . ಅವರು ನಮ್ಮೊಂದಿಗೆ ಬಂದಿದ್ದಕ್ಕೆ ಕಾರಣ ಇದ್ದಿರಬಹುದು ಅಥವಾ ಇಲ್ಲದಿರಬಹುದು. ಅದು ಅಷ್ಟೊಂದು ಅಚ್ಚರಿಯೆನಿಸೋಲ್ಲ. ಆದರೆ ಬಹಳ ಕಾಲ ಅಥವಾ ಸ್ವಲ್ಪಕಾಲವೇ ಆಗಲಿ, ಜೊತೆಯಲ್ಲೇ ಇದ್ದಾರೆಂಬ ಮಧುರವಾದ ಭಾವನೆಗಳನ್ನು ನಿಮ್ಮಲ್ಲಿ ಹುಟ್ಟುಹಾಕಿ ನಿಮ್ಮ ಮನದಲ್ಲೊಂದು ಭರವಸೆಯ ಹೊಂಗಿರಣವನ್ನು ಇಣುಕಿಸಿಯೋ ಅಥವಾ ನನ್ನೊಂದಿಗಿದ್ದಾರೆಂಬ ಒಂದು ಬೆಚ್ಚನೆಯ ಫ಼ೀಲಿಂಗಿನ ಸಿಂಚನವನ್ನು ಸಿಂಪಡಿಸಿಯೋ ನಂತರ ಹೇಳದೇ ಕೇಳದೇ ನಿಮ್ಮ ಸನಿಹಕ್ಕೂ ಸಾರದೇ ಲಿಸ್ಟಿಂದಲೇ ಡಿಲಿಟ್ ಆಗಿ ಹೋಗಿಬಿಡುವ ವ್ಯಕ್ತಿಗಳ ವರ್ತನೆಯೇ ನನ್ನಲ್ಲಿ ಇಂದಿಗೂ ವಿಸ್ಮಯ ಹುಟ್ಟಿಸುತ್ತಿರುವುದು…..!! ಇಂತಹವರ ಅರ್ಥವಾಗದ ವರ್ತನೆಗಳ ಬಗೆಗೆ ತಲೆಯೊಳಗೆ ಹುಳು ಬಿಟ್ಟು ಕೊಂಡಿರೋ…….ಅಲ್ಲಿಗೆ ನಿಮ್ಮ ಬ್ರೈನು ಖರಾಬ್ ಆಗಿ ‘ಕಬಾಬ್ ಮೆ ಅಡ್ಡಿ’ ಯಂತೆ ಕಲಸುಮೇಲೋಗರವಾಗಿ ಬಿಡುತ್ತದೆ…..!
ಈ ತರಹದ ಸಂಗತಿಗಳು ಕೇವಲ ಸ್ನೇಹ- ಪ್ರೀತಿಯಲ್ಲಿ , ಬಂಧು ಬಳಗದಲ್ಲಿ ಮಾತ್ರವೇ ನೆಡೆಯಬೇಕೆಂದೇನೂ ಇಲ್ಲ. ಹಾಗೆ ನೋಡಿದಲ್ಲಿ ಇವು ನಮ್ಮ ಬದುಕಿನ ನಿತ್ಯ ಘಟನೆಗಳೊಂದಿಗೆ ತಳುಕು ಹಾಕೊಕೊಂಡಿರುವುದು ಎಲ್ಲರ ಅನುಭವಕ್ಕೂ ಬಂದಿರಬಹುದು.
ಹಾಗೇ ಗಮನಿಸಿ…..!
ಕೆಲವರಿದ್ದರು… ತುಂಬಾ ಆತ್ಮೀಯವಾಗಿ, ಸಲಿಗೆಯಿಂದ- ಸ್ನೇಹದಿಂದ ಅಂಟಿಕೊಂಡೇ ಕೆಲ ಕಾಲ ಇದ್ದರು. ಆನಂತರ ನೋಡು ನೋಡುತ್ತಿದ್ದಂತೆಯೇ ಯಾವುದೇ ಕಾರಣ ಕೊಡದೇ ಹೇಳದೇ ಗಾಯಬ್ ಆಗಿ ಶಾಶ್ವತ ಬಂಧುತ್ವದಿಂದ ಕಳಚಿಕೊಂಡೇ ಬಿಟ್ಟರು..! ಯಾಕೆ ಹೀಗೆ ಎನ್ನುವ ತರ್ಕಕ್ಕೂ ನಿಲುಕದೇ, ಕುತರ್ಕಕ್ಕೂ ಸಿಲುಕದೇ ಅಂತವರು ಒಮ್ಮೆಲೇ ಮರೆಯಾಗಿ ಬಿಟ್ಟಿರುತ್ತಾರೆ.
ನಿಜವಾದ ಕಾರಣ ಗೊತ್ತೇ ಇರೋಲ್ಲ !
ನಿಮ್ಮ ಅಕ್ಕಪಕ್ಕದ ಮನೆಯವರು, ಒಂದೇ ಏರಿಯಾದವರು ನಿಮ್ಮೊಂದಿಗೆ ಕೆಲ ಕಾಲ ಅಂಟಿಕೊಂಡೇ ಇರುತ್ತಾರೆ. ನಿಮ್ಮ ಮನೆಗೂ ನಿತ್ಯ ಎಡತಾಕುತ್ತಾರೆ ಹಾಗೂ ಕಷ್ಟ- ಸುಖ, ಅಡಿಗೆ- ತಿಂಡಿ, ಗಂಡ- ಮನೆ- ಮಕ್ಕಳು- ಸಂಸಾರ…ಈ ಎಲ್ಲಾ ವಿಚಾರಗಳನ್ನೂ ನಿಮ್ಮೊಂದಿಗೆ ಅವರು, ಅವರೊಂದಿಗೆ ನೀವು ಹಂಚಿಕೊಂಡಿರುತ್ತೀರ ! ಆಮೇಲೆ ಅದೇನಾಗುತ್ತೋ ಗೊತ್ತಿಲ್ಲ… ಇದ್ದಕ್ಕಿದ್ದಂತೆ ಅವರು ನಿಮ್ಮಿಂದ ದೂರವಾಗಿ, ನೀವು ಎದುರಿಗೆ ಸಿಕ್ಕರೂ ಸಂಬಂಧವೇ ಇಲ್ಲದಂತೆ ಆಟಿಟ್ಯೂಡ್ ತೋರಿಸುತ್ತಾ ಮಾತು ಕೂಡಾ ಆಡದಂತೆ ಅಪರಿಚಿತರಾಗಿ ಬಿಡುತ್ತಾರೆ….. ಈ ಬಗ್ಗೆ ಏಕೆ ಏನು ಎಂದು ಕೇಳಬೇಕಾದ ಮನಸೇ ನಿಮ್ಮಲ್ಲಿ ಉದ್ಭವವಾಗದಂತೆ ಅವರ ವರ್ತನೆ ಡಿಫ಼ರೆಂಟಾಗಿ ಹೋಗಿರುತ್ತದೆ…!
ನೀವು ಉದ್ಯೋಗ ಮಾಡುವೆಡೆಯಲ್ಲೂ ಈ ಅನುಭವಗಳು ನಿಮ್ಮನ್ನು ಅಟಕಾಯಿಸಿಕೊಂಡು ಬರುತ್ತವೆ. ನನ್ನ ಅನುಭವದಲ್ಲಂತೂ ಈ ರೀತಿಯ ಗಿರಾಕಿಗಳ ದೊಡ್ಡ ಲಿಸ್ಟೇ ಇದೆ ! ಆ ಲಿಸ್ಟ್ ನಲ್ಲಿ ಒಂದನ್ನು ಹೆಕ್ಕಿ ತೆಗೆದು ಹೇಳುವುದಾದರೆ , ಬಹಳ ವರ್ಷದ ಹಿಂದೆ ನಾನು ಉದ್ಯೋಗ ಮಾಡುವ ಜಾಗದಲ್ಲಿ ಒಬ್ಬರ ಪರಿಚಯವಾಗಿ ನಂತರ ಅದು ಕ್ಲೋಸ್ ಫ಼್ರೆಂಡ್ ಶಿಪ್ ಗೆ ತಿರುಗಿತ್ತು. ಅವರ ನಿತ್ಯ ಬದುಕಿನ ನೋವು ನಲಿವನ್ನು ಧಾರಾವಾಹಿಯಂತೆ ನನ್ನಲ್ಲಿ ಹೇಳಿಕೊಳ್ಳುತ್ತಲೇ ಇದ್ದರು. ನಮ್ಮಿಬ್ಬರ ನಡುವೆ ಯಾವುದೇ ಕೊಡುವ ತೆಗೆದುಕೊಳ್ಳುವ ವ್ಯವಹಾರವಾಗಲೀ , ಸುಮಧುರ ಭಾಂದವ್ಯ ಕಿತ್ತು ಹೋಗುವಂತಹಾ Attitude ಆಗಲೀ ಇರದೆ ಅದೊಂದು ಪರಿಶುದ್ಧವಾದ ಸ್ನೇಹವೆಂದು ಅಂದುಕೊಂಡಿದ್ದೆ. ಹೀಗಿದ್ದ ಭಾಂದವ್ಯವನ್ನು ಎರಡು ಮೂರು ವರ್ಷಗಳ ತರುವಾಯ Atleast ಒಂದು ಷೋಕಾಸ್ ನೋಟೀಸು ಕೊಡದೇ ಹಾಗೇ ಸುಮ್ಮನೆ ಕಟ್ ಮಾಡಿ ದೂರ ಸರಿದರು ಆ ವ್ಯಕ್ತಿ ! ನನಗೆ ಅದರಿಂದ ವೈಯಕ್ತಿಕವಾಗಿ ಲಾಭವೂ ಇಲ್ಲ -ನಷ್ಟವೂ ಇಲ್ಲವೆನ್ನುವುದು ಬೇರೇ ಪ್ರಶ್ನೆ . ಆದರೆ ಎಲ್ಲೋ ಒಂದು ಕಡೆ ಈ ಘಟನೆ ತಲೆಯೊಳಗೆ ಸ್ವಲ್ಪ ದಿನ ಗುಂಗಾರಿಯಂತೆ ಗುಂಯ್‌ಗುಟ್ಟಿದ್ದು ನಿಜ . ಬರು ಬರುತ್ತಾ ಸೃಷ್ಟಿಯ ಇಂತಹಾ ವಿಚಿತ್ರ ಕ್ರಿಯೇಚರ್ ಗಳನ್ನು ಮನಸಿಗೆ ಹಚ್ಚಿಕೊಂಡು ಕೊರಗುವ ಸೀನ್ ಗಳನ್ನು ನಾನು ತಂದುಕೊಳ್ಳಲೇ ಇಲ್ಲದಷ್ಟರಮಟ್ಟಿಗೆ ಪಾಠ ಕಲಿತಿದ್ದೆ.
ಯಾವ ಲೆವೆಲ್ ಗೆ ಇಂಥವರು ಪಾಠ ಕಲಿಸಿದ್ದಾರೆಂದರೆ ಯಾರಾದರೂ … ” ಅಲ್ರೀ ಅವ್ರು ನಮ್ಮ ಹತ್ತಿರ ಎಷ್ಟೊಂದು ಚೆನ್ನಾಗಿದ್ರು. ಈ ನಡುವೆ ಮುಖ ಕೊಟ್ಟೇ ಮಾತಾಡೋಲ್ಲ. ವಿನಾ ಕಾರಣ ನಮ್ಮ ನೆರಳೂ ಸೋಕದಂತೆ ವರ್ತಿಸುತ್ತಾರಲ್ಲಾ….! ಇದ್ದಕ್ಕಿದ್ದಂತೆ ಏನೂ ಹೇಳದೇ ಅವರು ನನ್ನನ್ನು ಏಕೆ ದೂರ ಮಾಡಿರಬಹುದು….. ಎಂದು ಕೇಳಿದ್ರೆ…. “ಪೀಡೆ ತೊಲಗಿತು ಅಂತ ತೆಪ್ಪಗಿರಿ ” ಎನ್ನುವ ಒನ್ ಲೈನ್ ಖಡಕ್ ಆದ ನಿಷ್ಠುರ ಸಲಹೆ ಕೊಡುವಂತೆ ಈ ಬಗ್ಗೆ ಅನುಭವಗಳಾಗಿವೆ . ಇಂತಹಾ ವಿಲಕ್ಷಣ ವರ್ತನೆ ತೋರುವವರ ಬಗೆಗೆ ತಲೆಯಲ್ಲಿ ಹುಳು ಬಿಟ್ಟುಕೊಂಡಿರೋ…..ಹಾಳಾಗೋದು ನಿಮ್ಮ ತಲೆಯೇ…! ಜಸ್ಟ್ ಇಗ್ನೋರ್ ಇಟ್.
ಮರೆಯುವ ಮುನ್ನ
ಒಟ್ಟಿಗೆ ಬೆಸೆದುಕೊಂಡ ಒಂದು ಸಂಬಂಧ ಹಳಸಬೇಕಾದರೆ ಯಾವುದೋ ಒಂದು ನಿರ್ದಿಷ್ಟವಾದ ಕಾರಣವಿರಲೇಬೇಕು. ಅದು ಹೇಳಿಕೊಳ್ಳುವಂತಹಾ ಅಥವಾ ಎಲ್ಲರಿಗೂ ಗೊತ್ತಾಗುವಂತಹಾ ಕಾರಣವಿರಬಹುದು ಇಲ್ಲವೇ ಅವ್ಯಕ್ತವೂ ಆಗಿರಬಹುದು ! ಒಟ್ಟಿನಲ್ಲಿ ಸಂಬಂಧಗಳಿಂದ ದೂರವಾಗುವುದರ ಹಿಂದೆ ಒಂದು ಸಣ್ಣಮಟ್ಟಿನ ಕಾರಣವಂತೂ ಇರುತ್ತದೆಯೆನ್ನುವುದು ಸಹಜ. ಆದರೆ ಕಾರಣವಿಲ್ಲದೇ ತಾನಾಗಿಯೇ ಕಳಚಿಕೊಳ್ಳುವ ಸ್ನೇಹ -ಸಂಬಂಧಗಳು, ಬಂಧುತ್ವ ಬಾಂಧವ್ಯಗಳು ಪಕ್ಕಾ ಅಸಹಜತೆಯ , ತರಗೆಲೆಯ ಪ್ರತೀಕಗಳು. ಅವುಗಳಿಗೆ ಹೆಚ್ಚು ತಲೆಬಿಸಿ ಮಾಡಿಕೊಳ್ಳದೇ ಅದು ದೂರವಾಗಿದ್ದೇ ನಮ್ಮ ಒಳ್ಳೆಯದಕ್ಕಾಗಿ ಎನ್ನುವ ಸರಳ ಸತ್ಯವನ್ನು ಸಿಂಪಲ್ಲಾಗಿಯೇ ನಾವು ಅರ್ಥಮಾಡಿಕೊಳ್ಳಬೇಕಿದೆ…!
ಅವು ಫೇಸ್ ಬುಕ್ ಸಂಬಂಧಗಳಿಂದ ಹಿಡಿದು ನಮ್ಮ ಫೇಟ್ ನಿರ್ಧರಿಸುವ ಸಂಬಂಧಗಳವರೆಗೆ ಆಗಿರಬಹುದು ! ಕೆಲವೊಮ್ಮೆ ಮತ್ತೊಬ್ಬರ ಒನ್ ಸೈಡೆಡ್ ಕಾರಣಗಳೂ, ಹೇಳದೇ ಉಳಿದಿಹ ತಪ್ಪು ತಿಳಿವಳಿಕೆಗಳೂ ಬಾಂಧವ್ಯ ಮುರಿಯುವ ಹಿನ್ನೆಲೆಯಲ್ಲಿ ಕೆಲಸ ಮಾಡಲೂಬಹುದು. ಅದೇನೇ ಇದ್ದರೂ ನಿಮ್ಮ ಬದುಕಿನಲ್ಲಿ ಕಾರಣ ಹೇಳದೇ ಕಳಚಿಕೊಳ್ಳುವ ಸಂಬಂಧಗಳನ್ನು ಜಸ್ಟ್… ಗಾಳಿಗೆ ತೂರಿ ಬಿಡಿ ..!!
ಹೇಳುವ ಕಾರಣವಲ್ಲದಿದ್ದ ಮೇಲೆ ಅದನ್ನು ತಿಳಿದುಕೊಳ್ಳುವ ಕೆಟ್ಟ ಕುತೂಹಲವೂ ನಮಗೆ ಬೇಡ….ಅಲ್ಲವೇ ?
ಲಾಸ್ಟ್ ಪಂಚ್
ಯಾವುದೇ ಸಂಬಂಧಗಳು ಗಟ್ಟಿಯಾಗಿ ಉಳಿಯುವುದು ಪರಸ್ಪರ ಪ್ರಾಮಾಣಿಕ ಪ್ರೀತಿ, ನಂಬಿಕೆ ಹಾಗೂ ಗೌರವದಿಂದ. ಅವುಗಳಿಲ್ಲದ ಸಂಬಂಧಗಳು ತರಗೆಲೆಗಳಂತೆ ಎಂದಾದರೂ ಒಮ್ಮೆ ಉರುಳಿ ಬಿದ್ದೇ ಬೀಳುತ್ತವೆ…… !
ಹಾಂ…….ಅದಕ್ಕೆ ಕಾರಣವೇ ಬೇಕಿಲ್ಲಾ….!!