ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ತೆಲಗಿ ಬಳಿ ರೈಲ್ವೆ ಅಂಡರ್ ಪಾಸ್ ಹತ್ತಿರ ಹಾಕಿದ ಎತ್ತರ ನಿಯಂತ್ರಣ ಕಂಬ (ಓವರ್ ಹೈಟ್ ಗೇಜ್) ಗುರುವಾರ ಮುರಿದು ಬಿದ್ದ ಪರಿಣಾಮ ಭಾರಿ ಅನಾಹುತ ತಪ್ಪಿದೆ.
ರೈಲ್ವೇ ಅಂಡರ್ ಪಾಸ್ ಮೂಲಕ ಹಾದು ಹೋಗುವ ಎತ್ತರದ ಭಾರಿ ವಾಹನಗಳಿಗೆ ರೈಲ್ವೆ ಇಲಾಖೆಯವರು ಎತ್ತರದ ಮೀತಿಯನ್ನು ಸೂಚಿಸುವ ಓವರ್ ಹೈಟ್ ಗೇಜ್ ಗೆ ಅಡ್ಡಲಾಗಿ ಹಾಕಿದ ಭಾರಿ ತೂಕದ ಕಬ್ಬಿಣದ ಕಂಬವೊಂದು ಏಕಾಏಕಿ ಮುರಿದು ಬಿದ್ದಿದೆ. ಇದರಿಂದ ಎರಡು ಗಂಟೆ ಟ್ರಾಪಿಕ್ ಜಾಮ್ ಸಂಭವಿಸಿ ಪ್ರಯಾಣಿಕರು ಬಹಳಷ್ಟು ತೊಂದರೆ ಅನುಭವಿಸಿದ ಪ್ರಸಂಗ ಜರುಗಿದೆ. ಕೊಲ್ಹಾರ ಕಡೆಯಿಂದ ಬಸವನಬಾಗೇವಾಡಿ ಕಡೆಗೆ ಹೋಗುವ ಮಾರ್ಗದಲ್ಲಿ ತೆಲಗಿ ರೈಲ್ವೆ ಅಂಡರ ಪಾಸ್ ಬಳಿ ಕುಲಕರ್ಣಿಯವರ ಮನೆಯ ಹತ್ತಿರ ಈ ಘಟನೆ ಸಂಭವಿಸಿದೆ. ಈ ವೇಳೆ ಯಾವ ವಾಹನಗಳು ಸಂಚರಿಸದ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಭಾರಿ ಅನಾಹುತ ಒಂದು ತಪ್ಪಿದೆ. ಈ ದೃಶ್ಯ ಕಂಡ ವಾಹನ ಚಾಲಕರು ಹಾಗೂ ಪ್ರಯಾಣಿಕರು ಒಂದು ಕ್ಷಣ ಗಾಬರಿಯಾಗಿದ್ದಾರೆ. ನಂತರ ರೈಲ್ವೆ ಇಲಾಖೆಯವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಸ್ಥಳಕ್ಕೆ ಧಾವಿಸಿ ರಸ್ತೆಯನ್ನು ತೆರವುಗೊಳಿಸಿದರು.
ಈ ಘಟನೆ ಕಂಡು ಪ್ರತ್ಯಕ್ಷದರ್ಶಿ ತಾಲೂಕಿನ ಬಳೂತಿಯ ನಿವೃತ್ತ ಮೆಟ್ರೋ ಇಂಜನೀಯರ ನಾಗಪ್ಪ ಹೆಬ್ಬಿ ಮಾತನಾಡಿ, ತೆಲಗಿ ಬಳಿ ರೈಲ್ವೇ ಹಳಿ ಕೆಳಗಡೆ ವಾಹನಗಳು ಹಾಗೂ ಸಾರ್ವಜನಿಕರಿಗೆ ಸಂಚರಿಸಲಿಕ್ಕೆ ಅಂಡರ್ ಪಾಸ್ ನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಸೇತುವೆಯು ಕೆಳಮಟ್ಟದಾಗಿದೆ. ಈಗಾಗಲೇ ಈ ಕುರಿತು ಸುಮಾರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಯವರಿಗೆ ಗಮನಕ್ಕೆ ತಂದರೂ ಸಹ ಯಾರು ಇದರ ಬಗ್ಗೆ ಕ್ರಮವಹಿಸಿಲ್ಲ. ರಾಷ್ಟ್ರೀಯ ಹೆದ್ದಾರಿ ೨೧೮ ಹಾಗೂ ೫೦ ನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು ಹೀಗಾಗಿ ರೈಲ್ವೇ ಹಳಿ ಕೆಳಗಡೆ ಅಂಡರ್ ಪಾಸ್ ನ್ನು ಚಿಕ್ಕದಾಗಿ ನಿರ್ಮಿಸಿ ವಾಹನಗಳಿಗೆ ಸಂಚರಿಸಲಿಕ್ಕೆ ನಿಯಂತ್ರಣ ಹೇರಲು ಬರುವುದಿಲ್ಲ ಇದು ಕಾನೂನು ಬಾಹಿರವಾಗಿದೆ ಎಂದರು.
ಈ ಮೊದಲು ಇಲ್ಲಿ ಲೆವಲ್ ಕ್ರಾಸ್ಸಿಂಗ ಬ್ರಿಡ್ಜ್ ಇತ್ತು ಅಲ್ಲಿ ಯಾವುದೇ ಅಂಡರ್ ಪಾಸ್ ಜಾಗವಿರಲಿಲ್ಲ. ಆದರೆ ನೀರು ಹೋಗಲಿಕ್ಕೆ ಬಿಟ್ಟ ಕ್ರಾಸ್ ಡ್ರೈನೆಜ್ ನ್ನು ಅವೈಜ್ಞಾನಿಕವಾಗಿ ರೈಲ್ವೇ ಇಲಾಖೆಯವರು ಅಂಡರ್ ಪಾಸ್ ಮಾಡಿದ್ದಾರೆ. ಇದರಿಂದ ಈ ಮೂಲಕ ಹಾದು ಹೋಗುವ ಪ್ರಯಾಣಿಕರಿಗೆ ಹಾಗೂ ವಾಹನಗಳಿಗೆ ನಿತ್ಯ ಬಹಳಷ್ಟು ತೊಂದರೆಯಾಗುತ್ತಿದೆ ಕಾರಣ ಓವರ್ ಬ್ರಿಡ್ಜ್ ನಿರ್ಮಿಸಬೇಕೆಂದು ರೈಲ್ವೇ ಇಲಾಖೆಯವರಿಗೆ ಹಾಗೂ ಜಿಲ್ಲೆಯ ಸಂಸದರಿಗೆ ಒತ್ತಾಯಿಸಿದರು.

