ಬಜೆಟ್‌ನಲ್ಲಿ ‘ಜೀವ ವಿಮೆ’ ಭದ್ರತೆ ಮಿಸ್: ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಚೌಧರಿ ಬೇಸರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರಾವಳಿ ಮತ್ತು ಒಳನಾಡು ಮೀನುಗಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ‘ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತಿಸುತ್ತದೆ. ಮೀನುಗಾರರಿಗೆ ನೀಡುವ ಕಿಟ್ ದರವನ್ನು ₹10,000 ದಿಂದ ₹20,000ಕ್ಕೆ ಹೆಚ್ಚಿಸಿರುವುದು, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪನೆ, ಹಾಗೂ ಹೊಸ ‘ಮತ್ಸ್ಯದರ್ಶಿನಿ’ಗಳು ಮತ್ತು ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ನಿರ್ಮಿಸುತ್ತಿರುವ ಸರ್ಕಾರದ ಕ್ರಮ ಶ್ಲಾಘನೀಯ. ಈ ಯೋಜನೆಗಳು ಮೀನುಗಾರಿಕೆ ಮಾರುಕಟ್ಟೆ ವಿಸ್ತರಣೆಗೆ ವರದಾನವಾಗಲಿವೆ ಎಂದು ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಗೌತಮ್ ಚೌಧರಿ ಅವರು ತಿಳಿಸಿದ್ದಾರೆ.
ಆದರೆ, ಕಡಲಿಗೆ ಇಳಿಯುವ ಮೀನುಗಾರರ ಬದುಕಿನ ಅತ್ಯಂತ ಸೂಕ್ಷ್ಮ ಹಾಗೂ ಜರೂರತ್ತಿನ ಬೇಡಿಕೆಗಳನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಮೀನುಗಾರರ ಕಲ್ಯಾಣ ಎಂದರೆ ಕೇವಲ ಮಾರುಕಟ್ಟೆ ನಿರ್ಮಾಣವಲ್ಲ. ಪ್ರತಿದಿನ ಪ್ರಾಣದ ಹಂಗು ತೊರೆದು ಸಮುದ್ರಕ್ಕಿಳಿಯುವ ಮೀನುಗಾರನಿಗೆ ಈ ಬಜೆಟ್‌ನಲ್ಲಿ ‘ಜೀವ ವಿಮೆ’ಯ ಭದ್ರತೆ ಮಿಸ್ ಆಗಿದೆ. ಮೀನುಗಾರರ ಸಾವಿನ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಪರಿಹಾರದ ಮೊತ್ತ ಹೆಚ್ಚಳದ ಬಗ್ಗೆ ಸರ್ಕಾರ ಮೌನ ವಹಿಸಿದೆ. ಇದರ ಜೊತೆಗೆ, ಬಡ ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಪ್ರೋತ್ಸಾಹಧನ ಹಾಗೂ ಮೀನುಗಾರರ ಕುಟುಂಬಗಳ ಆರ್ಥಿಕ ನಿರ್ವಹಣೆಗೆ ಸಿಗಬೇಕಿದ್ದ ನೇರ ನೆರವು ಬಜೆಟ್‌ನಲ್ಲಿ ಸಂಪೂರ್ಣವಾಗಿ ಕೈಬಿಟ್ಟು ಹೋಗಿರುವುದು ದುರಾದೃಷ್ಟಕರ. ಮೂಲಸೌಕರ್ಯದ ಜೊತೆಗೆ ಮೀನುಗಾರನ ಜೀವ ಹಾಗೂ ಆತನ ಕುಟುಂಬದ ಭವಿಷ್ಯಕ್ಕೂ ಸರ್ಕಾರ ಆದ್ಯತೆ ನೀಡಬೇಕಿತ್ತು” ಎಂದು ಡಾ. ಗೌತಮ್ ಚೌಧರಿ ತಮ್ಮ ಹೇಳಿಕೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

