ಕೊಲ್ಹಾರ: ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ಮೇಲೆ ಆಕರ್ಷಿತರಾಗಬಾರದೆನ್ನುವ ಕಾರಣಕ್ಕಾಗಿ ಶಾಲಾ-ಕಾಲೇಜುಗಳ ೧೦೦ಮೀ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿಗಳಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಒಂದು ವೇಳೆ ಮಾರಾಟ ಮಾಡಿದ್ದೆಯಾದಲ್ಲಿ ಅಂಗಡಿಗಳ ಮೇಲೆ ಸೂಕ್ತ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ ಎಸ್.ಎಸ್. ನಾಯಕಲಮಠ ಹೇಳಿದರು.
ಪಟ್ಟಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಾಲೂಕಿನಾದ್ಯಂತ ಹಮ್ಮಿಕೊಂಡ ಗುಲಾಬಿ ಆಂದೋಲನ ಜನಜಾಗೃತಿ ಕಾರ್ಯಕ್ರಮಕ್ಕೆ ಸರ್ಕಾರಿ ಪ್ರೌಢ ಶಾಲಾ ವ್ಯಾಪ್ತಿಯ ಗೂಡಂಗಡಿಗಳ ಮಾಲಿಕರಿಗೆ ವಿದ್ಯಾರ್ಥಿಗಳಿಂದ ಗುಲಾಬಿ ಹೂವು ಕೊಡಿಸಿ ಮಾತನಾಡಿದರು.
ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಅವುಗಳನ್ನು ಸೇವಿಸುವುದು ಬಹಳಷ್ಟು ಅಪಾಯಕಾರಿಯಾಗಿದೆ. ಸರ್ಕಾರದ ಆದೇಶದ ಅನುಸಾರ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಇಂದು ಪಟ್ಟಣದ ಶಾಲಾ ಕಾಲೇಜುಗಳ ಸುತ್ತಮುತ್ತ ನೂರು ಮೀಟರ್ ಅಂತರದಲ್ಲಿ ವ್ಯಾಪಾರ ಮಾಡುವಂತಹ ವ್ಯಾಪಾರಸ್ಥರಿಗೆ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಮರಾಟ ಮಾಡಬಾರದು ಎಂದು ಗುಲಾಬಿ ಹೂವನ್ನು ಕೊಡುವುದರ ಮೂಲಕ ಒಂದು ವಾರದ ಗಡುವನ್ನು ನೀಡಲಾಗಿದೆ. ಮನವರಿಕೆ ಮಾಡಿದ ನಂತರವೂ ಕೂಡಾ ತಂಬಾಕು ಮಾರಾಟವನ್ನು ಮಾಡಿದರೆ ಅಂತವರ ಮೇಲೆ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಲಕ್ಷ್ಮೀ ತೆಲ್ಲೂರ ಮಾತನಾಡಿದರು.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆ, ಸಿಕ್ಯಾಬ್ ಪ್ರೌಢ ಶಾಲೆ, ಎಮ್‌ಪಿಎಸ್ ಶಾಲೆ ಸೇರಿದಂತೆ ಎಲ್ಲ ಶಾಲಾ ಕಾಲೇಜಿನ ಸುತ್ತಮುತ್ತಲಿರುವ ಅಂಗಡಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಅಂಗಡಿ ವ್ಯಾಪಾರಸ್ಥರಿಗೆ ಗುಲಾಬಿ ಹೂವನ್ನು ನೀಡಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತರಿಗೆ ಮಾರಾಟ ಮಾಡದಂತೆ ತಹಶೀಲ್ದಾರ ಎಸ್.ಎಸ್. ನಾಯಕಲಮಠ ಹಾಗೂ ವೈದ್ಯಾಧಿಕಾರಿ ಲಕ್ಷ್ಮೀ ತೆಲ್ಲೂರ ವಿನಂತಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಎಎಸ್‌ಐ ಎಸ್.ಎಸ್. ಬಡಿಗೇರ, ಶಿಕ್ಷಣ ಸಂಯೋಜಕ ಜಿ.ಎಸ್. ಗಣಿಯವರ, ಸಿಆರ್‌ಪಿ ಜಿ.ಆಯ್. ಗೊಡ್ಯಾಳ, ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಅಶೋಕ ಕೊಲ್ಹಾರ, ಎಲ್.ಎಲ್. ಕಟಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

