ಸಿದ್ಧಾಪುರ ಗ್ರಾಮದಲ್ಲಿ “ವಿಬಿ ಜಿ ರಾಮ ಜಿ” ಜನ ಜಾಗೃತಿ | ತಾಪಂ ಇಓ ಆನಂದಕುಮಾರ ಮ್ಯಾಗೇರಿ ಕರೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಿನ ಸಿದ್ಧಾಪುರ ಕೆ ಗ್ರಾಮ ಪಂಚಾಯತಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಹಮ್ಮಿಕೊಂಡ “ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಷನ್ ಗ್ರಾಮೀಣ – ವಿಬಿ ಜಿ ರಾಮ ಜಿ” ಯೋಜನೆಯ ಜನಜಾಗೃತಿ ಕಾರ್ಯಕ್ರಮಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಆನಂದಕುಮಾರ ಮ್ಯಾಗೇರಿ ಚಾಲನೆ ನೀಡಿ ಮಾತನಾಡಿದರು.
ಯೋಜನೆಯ ಕುರಿತು ಮಾತನಾಡಿದ ಅವರು, ಮನರೇಗಾ ಬದಲಾಗಿ ಈ ಯೋಜನೆಯು ಜುಲೈ 01 ರಿಂದ ಆರಂಭವಾಗಿದೆ. ಆದ್ದರಿಂದ ಈ ಯೋಜನೆಯ ಕುರಿತು ಮನೆ ಮನೆಗೂ ಮಾಹಿತಿಯನ್ನು ತಲುಪಿಸುವ ಕಾರ್ಯ ಕೈಗೊಳ್ಳಲಾಗಿದ್ದು, ಎಲ್ಲಾ ಅಧಿಕಾರಿಗಳು & ಸಿಬ್ಬಂದಿಗಳು ಕ್ರೀಯಾಶೀಲರಾಗಿ ಈ ಜನಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಪ್ರತಿಯೊಬ್ಬರಿಗೂ ಮಾಹಿತಿ ತಲುಪುವಂತೆ ಮಾಡಬೇಕು ಎಂದರು.
ಈ ಹೊಸ ಯೋಜನೆಯಡಿ ಗ್ರಾಮೀಣ ಕೂಲಿಕಾರರಿಗೆ ಹಲವು ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಮುಖ್ಯವಾಗಿ ಕೂಲಿ ಏರಿಕೆ, ಹಿಂದೆ ಇದ್ದ ರೂ 370 ದಿನಗೂಲಿಯನ್ನು ಈಗ ರೂ 382/- ಕ್ಕೆ ಏರಿಕೆ ಮಾಡಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುತ್ತದೆ. ಕೆಲಸದ ದಿನಗಳು, ಮೊದಲು ಇದ್ದ 100 ದಿನಗಳ ಬದಲು ಈಗ 125 ಮಾನವ ದಿನಗಳ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ. ತ್ವರಿತ ಪಾವತಿ, ಕೂಲಿ ಹಣವನ್ನು ಗರಿಷ್ಠ 15 ದಿನಗಳ ಒಳಗೆ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ವಿಳಂಬವಾದರೆ ದಂಡದ ರೂಪದಲ್ಲಿ ಪರಿಹಾರ ನೀಡಲಾಗುತ್ತದೆ ಎಂದರು.
ನಮ್ಮ ತಾಲೂಕು ವ್ಯಾಪ್ತಿಯ ಯಾವೊಬ್ಬ ಕೂಲಿಕಾರರು ತಮ್ಮ ಊರಿನಲ್ಲಿಯೇ ವಿಬಿಜಿರಾಮಜಿ ಯೋಜನೆಯಡಿ ಕೂಲಿ ಕೆಲಸ ಮತ್ತು ಜೀವನೋಪಾಯ ಸೌಲಭ್ಯ ಪಡೆದುಕೊಳ್ಳಬೇಕು. ಎಲ್ಲಾ ನೋಂದಾಯಿತ ಕೂಲಿಕಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಹೊಸದಾಗಿ ಉದ್ಯೋಗ ಚೀಟಿ ಪಡೆಯಲು ಅರ್ಹರಿರುವವರು ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಬೇಕು” ಎಂದು ಅವರು ಕರೆ ನೀಡಿದರು.
ತಾಲೂಕು ಐಇಸಿ ಸಂಯೋಜಕರಾದ ಕಲ್ಲಪ್ಪ ನಂದರಗಿ ಮಾತನಾಡಿ, “ಜನರು ಈ ಯೋಜನೆಯಡಿ ಹೊಸದಾಗಿ ಜಾಬ್ ಕಾರ್ಡ್ಗಳಿಲ್ಲವೆಂದು ಭಯಪಟ್ಟುಕೊಳ್ಳುವ ಅಗತ್ಯವಿಲ್ಲ. ಹೊಸ ಕಾರ್ಡ್ಗಳು ಬರುವವರೆಗೆ ಈಗಾಗಲೇ ನರೇಗಾ ಯೋಜನೆಯಡಿ ವಿತರಿಸಿದ ಕಾರ್ಡ್ಗಳೇ ಅಲ್ಲಿಯವರೆಗೆ ಮಾನ್ಯವಾಗಿರುತ್ತವೆ. ಅವುಗಳನ್ನೇ ಬಳಸಿಕೊಂಡು ಜನರು ಕೆಲಸ ಪಡೆದುಕೊಳ್ಳಬಹುದು. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಹಡಪದ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಲಿಡ್ ಬ್ಯಾಂಕಿನ ವಿರೇಶ ಡೆಂಗಿ, ಕಾರ್ಯದರ್ಶಿ ಎಸ್.ಎಮ್.ಕೋಳಿ, ಡಿಇಓ ರವಿ ಪವಾರ, ಎಂ.ಬಿ.ಕೆ ಶೈಲಾ ಪಂಚಾಳ, ಕಾಯಕ ಮಿತ್ರ ಸಂಗೀತಾ ಸಪ್ತಾಳಕರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಸ್ವಸಹಾಯ ಗುಂಪಿನ ಮಹಿಳೆಯರು ಮತ್ತು ನೂರಾರು ಕೂಲಿಕಾರರು ಉಪಸ್ಥಿತರಿದ್ದರು.

