ಅರಣ್ಯದ ಮಡಿಲಲ್ಲಿ ಮಂಜಿನ ಸೆರಗು ಹೊದ್ದು ಮಿನುಗುತ್ತಿರುವ ಸಾವಳಗಿ ಗುಡ್ಡ | ಮಳೆಗಾಲದಲ್ಲಿ ಪ್ರಕೃತಿ ಪ್ರೀಯರ ಆಕರ್ಷಣೆ | ಜಮಖಂಡಿಯಿಂದ ಕೇವಲ 25 ಕಿ.ಮೀ ದೂರ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಬೆಳಗಿನ ಜಾವ ಗುಡ್ಡದ ಮೇಲೆ ಕಾಲಿಟ್ಟರೆ ಸುತ್ತಮುತ್ತಲಿನ ಬೆಟ್ಟಗಳನ್ನು ಆವರಿಸಿಕೊಂಡಿರುವ ಮಂಜಿನ ಹೊದಿಕೆ, ಪಿಸುಗುಟ್ಟುವ ತಂಗಾಳಿ, ಮಳೆಯ ಹನಿಗಳಿಂದ ಪರಿಮಳ ಬೀರುವ ಮಣ್ಣಿನ ಸುವಾಸನೆ, ಪಕ್ಷಿಗಳ ಕಲರವ, ಗಾಳಿಗೆ ತೂಗಾಡುವ ಮರಗಳು – ಇವೆಲ್ಲವೂ ಸೇರಿ ಪ್ರಕೃತಿಯ ಅದ್ಭುತ ಲೋಕವನ್ನೇ ಸೃಷ್ಟಿಸುತ್ತವೆ. ನಗರ ಜೀವನದ ಗದ್ದಲ ಮತ್ತು ಒತ್ತಡದಿಂದ ದೂರವಾಗಿ ಕೆಲ ಕ್ಷಣ ನೆಮ್ಮದಿಯಾಗಿ ಕಾಲ ಕಳೆಯಲು ಬಯಸುವವರಿಗೆ ಇದು ಪ್ರಕೃತಿಯೇ ನೀಡಿರುವ ಅಮೂಲ್ಯ ಉಡುಗೊರೆಯಾಗಿದೆ.
ಉತ್ತರ ಕರ್ನಾಟಕ ಎಂದರೆ ಬಿಸಿಲು, ಬರ, ಒಣ ಭೂಮಿ ಎಂಬ ಕಲ್ಪನೆ ಅನೇಕರಲ್ಲಿದೆ. ಆದರೆ ಆ ಕಲ್ಪನೆಯನ್ನು ಕ್ಷಣಾರ್ಧದಲ್ಲಿ ಬದಲಾಯಿಸುವಂತಹ ಪ್ರಕೃತಿಯ ಅಪರೂಪದ ಸ್ವರ್ಗ ಜಮಖಂಡಿ ತಾಲೂಕಿನಲ್ಲೇ ಅಡಗಿದೆ. ಅದುವೇ ಸಾವಳಗಿ ಗುಡ್ಡ.
ಅರಣ್ಯದ ಮಡಿಲಲ್ಲಿ ನೆಲೆಸಿರುವ ಈ ಗುಡ್ಡ ಮಳೆಗಾಲದಲ್ಲಿ ಹಚ್ಚಹಸಿರಿನ ಹೊದಿಕೆ ಹೊದ್ದು, ಮಂಜಿನ ಸೆರಗು ಧರಿಸಿ, ಮೋಡಗಳ ನಡುವೆ ಕಂಗೊಳಿಸುತ್ತಿದ್ದು, ಪ್ರಕೃತಿ ಪ್ರಿಯರ ಮನಸ್ಸನ್ನು ಸೂರೆಗೊಳ್ಳುತ್ತಿದೆ.
ಜಮಖಂಡಿ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಸಾವಳಗಿ ಗುಡ್ಡವನ್ನು ಕೇವಲ ಅರ್ಧ ಗಂಟೆಯಲ್ಲಿ ತಲುಪಬಹುದು. ವ್ಯೂ ಪಾಯಿಂಟ್‌ವರೆಗೆ ಕಾರು ಮತ್ತು ದ್ವಿಚಕ್ರ ವಾಹನಗಳು ಸಂಚರಿಸಬಹುದು. ಅಲ್ಲಿಂದ ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಸಾಗಿದರೆ ಅರಣ್ಯದ ಮಧ್ಯೆ ತೆರೆದುಕೊಳ್ಳುವ ಪ್ರಕೃತಿಯ ಅದ್ಭುತ ದೃಶ್ಯ ಕಣ್ಮನ ಸೆಳೆಯುತ್ತದೆ.
ಇತ್ತೀಚೆಗೆ ಸುರಿದ ಮಳೆಯಿಂದ ಇಡೀ ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಗುಡ್ಡಗಳ ಇಳಿಜಾರುಗಳಲ್ಲಿ ಹಸಿರು ಹುಲ್ಲಿನ ಹಾಸು, ಮೋಡಗಳ ನೆರಳಿನಲ್ಲಿ ಮಿನುಗುವ ಕಣಿವೆಗಳು, ದೂರದವರೆಗೆ ಹರಡಿರುವ ಸಮತಟ್ಟು ಪ್ರದೇಶ, ಮಧ್ಯೆ ಮಧ್ಯೆ ಸುರಿಯುವ ತುಂತುರು ಮಳೆ – ಈ ಎಲ್ಲ ದೃಶ್ಯಗಳು ಪ್ರವಾಸಿಗರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುವ ಅನುಭವ ನೀಡುತ್ತವೆ.
ವಾರಾಂತ್ಯಗಳಲ್ಲಿ ಬೈಕ್ ಸವಾರರ ತಂಡಗಳು, ಯುವಕರು, ಕುಟುಂಬ ಸಮೇತ ಆಗಮಿಸುವ ಪ್ರವಾಸಿಗರು, ಪ್ರಕೃತಿ ಛಾಯಾಗ್ರಾಹಕರು ಮತ್ತು ವಿಡಿಯೊ ಚಿತ್ರೀಕರಣ ತಂಡಗಳು ಸಾವಳಗಿ ಗುಡ್ಡಕ್ಕೆ ಆಗಮಿಸುತ್ತಿದ್ದಾರೆ. ಗುಡ್ಡದ ಮೇಲಿನಿಂದ ಕಾಣುವ ಹಸಿರು ಬೆಟ್ಟಗಳು, ಮಂಜಿನ ಹೊದಿಕೆ ಮತ್ತು ಮೋಡಗಳ ಆಟವನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಮಳೆಗಾಲದಲ್ಲಿ ಈ ಪ್ರದೇಶ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಹಾಗೂ ಪ್ರಕೃತಿ ಛಾಯಾಗ್ರಹಣಕ್ಕೂ ಸೂಕ್ತ ತಾಣವಾಗಿ ಹೊರಹೊಮ್ಮುತ್ತಿದೆ.
ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಈ ಗುಡ್ಡ ಪರಿಸರದ ದೃಷ್ಟಿಯಿಂದಲೂ ಅಪಾರ ಮಹತ್ವ ಹೊಂದಿದೆ. ವಿವಿಧ ಜಾತಿಯ ಮರಗಳು, ಔಷಧೀಯ ಸಸ್ಯಗಳು, ಪಕ್ಷಿಗಳ ಕಲರವ ಹಾಗೂ ಜೀವವೈವಿಧ್ಯ ಈ ಪ್ರದೇಶದ ವೈಶಿಷ್ಟ್ಯವಾಗಿದೆ. ಮಳೆಗಾಲದಲ್ಲಿ ಇಡೀ ಅರಣ್ಯ ಹಸಿರು ಹೊದಿಕೆ ಹೊದ್ದುಕೊಂಡು ನೈಸರ್ಗಿಕ ಶೀತಲ ವಾತಾವರಣವನ್ನು ಸೃಷ್ಟಿಸುತ್ತದೆ. ಹೀಗಾಗಿ ಇಲ್ಲಿ ಭೇಟಿ ನೀಡುವವರು ಪ್ರಕೃತಿಯ ಸೌಂದರ್ಯದ ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವವನ್ನೂ ಅರಿಯುತ್ತಾರೆ.
ಅರಣ್ಯ ಉಳಿದರೆ ಮಾತ್ರ ಪ್ರಕೃತಿ ಉಳಿವು: ಅರಣ್ಯದ ಮಧ್ಯದಲ್ಲಿರುವ ಈ ಅಪರೂಪದ ಪ್ರಕೃತಿ ತಾಣವನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯ ಎಸೆಯದೆ, ಮದ್ಯಪಾನ, ಬೆಂಕಿ ಹಚ್ಚುವುದು ಅಥವಾ ಅರಣ್ಯಕ್ಕೆ ಹಾನಿಯಾಗುವ ಯಾವುದೇ ಚಟುವಟಿಕೆ ನಡೆಸದೆ ಜವಾಬ್ದಾರಿಯುತವಾಗಿ ವರ್ತಿಸಬೇಕು. ಪರಿಸರವನ್ನು ಕಾಪಾಡಿದರೆ ಮಾತ್ರ ಮುಂದಿನ ಪೀಳಿಗೆಗೂ ಸಾವಳಗಿ ಗುಡ್ಡದ ಈ ಅಪರೂಪದ ಸೌಂದರ್ಯವನ್ನು ಕಾಣುವ ಅವಕಾಶ ದೊರೆಯುತ್ತದೆ.

ಇತಿಹಾಸ ಸಾರುವ ಶಿವಲಿಂಗೇಶ್ವರ ದೇವಾಲಯ
ಸಾವಳಗಿ ಗುಡ್ಡದ ಮತ್ತೊಂದು ಪ್ರಮುಖ ಆಕರ್ಷಣೆ ಜಗದ್ಗುರು ಶಿವಲಿಂಗೇಶ್ವರ ದೇವಾಲಯ. ಸುಮಾರು ಕ್ರಿ.ಶ. 1752ರ ಇತಿಹಾಸ ಹೊಂದಿದೆ ಎಂದು ಹೇಳಲಾಗುವ ಈ ದೇವಾಲಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಗುಡ್ಡದ ಮೇಲಿರುವ ಈ ದೇವಾಲಯಕ್ಕೆ ವರ್ಷಪೂರ್ತಿ ಭಕ್ತರು ಆಗಮಿಸುತ್ತಾರೆ. ಮಳೆಗಾಲದಲ್ಲಿ ದೇವಾಲಯದ ಸುತ್ತಮುತ್ತಲಿನ ಹಸಿರು ಪರಿಸರ ಹಾಗೂ ಮಂಜಿನ ವಾತಾವರಣ ಭಕ್ತರಿಗೆ ವಿಶಿಷ್ಟ ಆಧ್ಯಾತ್ಮಿಕ ಅನುಭವ ನೀಡುತ್ತದೆ.
ಅಭಿವೃದ್ಧಿಗೆ ಕಾಯುತ್ತಿರುವ ಪ್ರವಾಸಿ ತಾಣ
ಇಷ್ಟೊಂದು ನೈಸರ್ಗಿಕ ಸೌಂದರ್ಯ ಹೊಂದಿದ್ದರೂ ಸಾವಳಗಿ ಗುಡ್ಡ ಇನ್ನೂ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ತನ್ನ ಸ್ಥಾನ ಪಡೆಯಬೇಕಿದೆ. ಇಲ್ಲಿ ಮಾಹಿತಿ ಫಲಕಗಳು, ಸುರಕ್ಷತಾ ತಡೆಗೋಡೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಾಹನ ನಿಲುಗಡೆ, ವೀಕ್ಷಣಾ ಮಂಟಪ ಹಾಗೂ ಸ್ವಚ್ಛತಾ ವ್ಯವಸ್ಥೆ ಅಭಿವೃದ್ಧಿಪಡಿಸಿದರೆ ಉತ್ತರ ಕರ್ನಾಟಕದ ಪ್ರಮುಖ ಪರಿಸರ ಪ್ರವಾಸಿ ತಾಣವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳೂ ಹೆಚ್ಚಾಗಲಿವೆ.

