ಲೇಖನ
– ಶೀತಲ್ ಹೆಗಡೆ
ಉದಯರಶ್ಮಿ ದಿನಪತ್ರಿಕೆ
‘ರಾಜನ ಮಗ ರಾಜ’ ಇದು ಮೊದಲಿನಿಂದಲೂ ನಡೆದು ಬಂದ ಘೋಷ ವಾಕ್ಯ. ಅದು ಒಂದು ರೀತಿಯಲ್ಲಿ ಸತ್ಯವೂ ಹೌದು. ಅದೆಷ್ಟೋ ರಾಜರ ಮಕ್ಕಳೇ ಮುಂದೆ ವಂಶಪಾರಂಪರ್ಯವಾಗಿ ಆಳ್ವಿಕೆ ನಡೆಸಿದ ಉದಾಹರಣೆಗಳೆಷ್ಟಿಲ್ಲ. ರಾಜ ಎಂಬ ಪದವಿ ಅವರಿಗೆ ಮಾತ್ರ ಸೀಮಿತವಾ, ಅವರದ್ದೇ ಸ್ವತ್ತಾ, ಅವರಿಗೆ ಮಾತ್ರ ಅಧಿಕಾರಕ್ಕೆ ಬರಲು ಆಸ್ಪದವಾ, ಹೀಗೆ ಹತ್ತು ಹಲವಾರು ಪ್ರಶ್ನೆಗಳು ವಿಚಾರಗಳನ್ನು ಪ್ರಸ್ತುತಕ್ಕೆ ಸಂಬಂಧಿಸಿ ಅವಲೋಕಿಸಿದಾಗ ಕಂಡುಬರುವ ಉತ್ತರ ಒಂದೇ ‘ಖಂಡಿತ ಅಲ್ಲ’.
ಹಾಗಾದರೆ ಯಾವತ್ತೂ ರಾಜರ ಮಕ್ಕಳೇ ಆಳ್ವಿಕೆ ಅಧಿಕಾರವನ್ನು ನಡೆಸುವವರಾ, ಬೇರೆಯವರಿಗೆ ಅವಕಾಶ ಇಲ್ಲವಾ ಅನ್ನುವ ಮಾತಿಗೆ ಸಂಪೂರ್ಣವಾದ ಒಮ್ಮತದ ಉತ್ತರ ದೊರೆಯುವುದು ಕಷ್ಟಸಾಧ್ಯ. ಹಾಗಾದರೆ ಈ ಮಾತಿಗೆ ಉತ್ತರವಾಗಿ ನಮ್ಮಲ್ಲಿ ಅನೇಕ ದೃಷ್ಟಾಂತಗಳನ್ನು ಕಂಡಿದ್ದೇವೆ.
ಇಲ್ಲಿ ರಾಜನ ಮಗನು ರಾಜನಾಗುವುದು ವಂಶಪರಂಪರೆಯಿಂದಾದರೆ, ಅವನ ಸಾಧನೆಯಿಂದಾದರೆ ಮಾತ್ರ ಅವನು ಜನಮಾನಸದಲ್ಲಿ ಅಮರವಾಗಿ ಉಳಿದು ಇತಿಹಾಸ ಸೃಷ್ಟಿಸುತ್ತಾನೆ ಹೊರತು ಕೇವಲ ರಾಜನ ಮಗನಾಗಿ ಅಲ್ಲವೆಂಬುದು ಸತ್ಯ.
ರಾಜ ಅಂದರೆ ಕೇವಲ ಸಿಂಹಾಸನವನ್ನೇರಿ ದರ್ಪ ತೋರಿ ಎಲ್ಲವನ್ನೂ, ಎಲ್ಲರನ್ನೂ ಸೂತ್ರಧಾರನಂತೆ ಕುಣಿಸುವುದಲ್ಲ. ಪ್ರಜೆಗಳನ್ನು ಮಕ್ಕಳಂತೆ ತಿಳಿದು ಅವರ ಒಳ್ಳೆಯದು ಕೆಟ್ಟದ್ದು ಯಾವುದೆಂದು ಅರಿತು ಸಮಾಜ ಉದ್ಧರಿಸಿವುದರೊಂದಿಗೆ ನಾಡು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿದೆ.

ಡಾ. ಅಬ್ದಲ್ ಕಲಾಂ
ಡಾ. ಅಬ್ದಲ್ ಕಲಾಂ ರವರು ಹುಟ್ಟು ಬಡಕುಟುಂಬ ನೆನಪಿಟ್ಟುಕೊಳ್ಳುವಂತಹ ಮನೆತನವೇನಲ್ಲ, ಆದರೆ ಭಾರತದ ರಾಷ್ಟ್ರಪತಿ ಹಾಗೂ ಮಹಾನ್ ವಿಜ್ಞಾನಿಯಾಗಿ ಜನಮಾನಸದಲ್ಲಿ ಅಜರಾಮರವಾಗಿರುವರು. ವಂಶಪಾರಂಪರೆ ಇಲ್ಲಿಲ್ಲ.
ಡಾ. ಬಿ ಆರ್ ಅಂಬೇಡ್ಕರ್
ಡಾ. ಬಿ ಆರ್ ಅಂಬೇಡ್ಕರ್ ಇವರು ಅತ್ಯಂತ ಕೆಳವರ್ಗದಲ್ಲಿ ಜನಿಸಿ ಅಲ್ಲಿನ ತಾರತಮ್ಯ, ಅಸ್ಪ್ರಶ್ಯ ಮನೋಭಾವದ ಮನಸ್ಸನ್ನು ಖಂಡಿಸಿ ಅನೇಕ ಸಾಮಾಜಿಕ ಅಡೆತಡೆಗಳನ್ನು ದಿಕ್ಕರಿಸಿ ಸಾಮಾಜಿಕ ಹೋರಾಟಗಾರ ಮತ್ತು ಸಂವಿಧಾನ ಶಿಲ್ಪಿಯೆನಿಸಿದರು. ಇಲ್ಲಿಯೂ ವಂಶಪಾರಂಪರೆ ಎಂಬುದಿಲ್ಲ.
ಶ್ರೀ ನಾರಾಯಣಮೂರ್ತಿ
ಶ್ರೀ ನಾರಾಯಣಮೂರ್ತಿ ತಮ್ಮ ದೂರದೃಷ್ಟಿ ಮತ್ತು ಕಠಿಣ ಪರಿಶ್ರಮದಿಂದ ಜಾಗತಿಕ ಮಟ್ಟದ ಇನ್ಫೋಸಿಸ್ ಸಂಸ್ಥೆಯನ್ನು ಹುಟ್ಚುಹಾಕಿದರು. ಅದೀಗ ಕೋಟಿ ಮಂದಿಗೆ ಬದುಕಿನ ಮೂಲವಾಗಿದೆ. ಇಲ್ಲಿಯೂ ವಂಶಪಾರಂಪರೆ ಇಲ್ಲಾ.
ಕಲ್ಪನಾ ಚಾವ್ಲಾ
ಕಲ್ಪನಾ ಚಾವ್ಲಾ ತಮ್ಮ ಸಾಮರ್ಥ್ಯದಿಂದ ಅಂತರಿಕ್ಷಯಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ಮೇರಿಕೋಮ್
ಮೇರಿಕೋಮ್ ಸವಾಲುಗಳನ್ನು ಮೀರಿ ವಿಶ್ವಚಾಂಪಿಯನ್ನಾಗಿ ಹೊರಹೊಮ್ಮಿದರು.
ಪಿ. ವಿ. ಸಿಂಧು
ಪಿ. ವಿ. ಸಿಂಧು ಕಠಿಣ ಪರಿಶ್ರಮದಿಂದ ವಿಶ್ವದ ಶ್ರೇಷ್ಟ ಬ್ಯಾಂಡ್ಮಿಂಟನ್ ಆಟಗಾರ್ತಿಯಲ್ಲಿ ಅಗ್ರಶ್ರೇಣಿಯಲ್ಲಿರುವರು.
ಹೀಗೇ ವಂಶಕ್ಕಿಂತ ಸಾಧನೆಯಲ್ಲಿ ತಮ್ಮ ಹಿರಿಮೆ ಗರಿಮೆ, ಪರಿಶ್ರಮ, ಕಠಿಣ ಸವಾಲುಗಳನ್ನು ಎದುರಿಸಿ ಇಂದು ಸಮಾಜದಲ್ಲಿ ಅವರವರ ಯೋಗ್ಯತೆಯನ್ನು ಮೀರಿ ಸಾಧನೆಯ ಹಾದಿಯಲ್ಲಿ ರಾಜ-ರಾಣಿಯರೇ ಆಗಿರುವರು. ತಮ್ಮ ಬುದ್ದಿವಂತಿಕೆ ಚಾಕಚಕ್ಯತೆಯಿಂದ ಸಾವಿರಾರು ಕೋಟಿ ಜನರಿಗೆ ಮಾದರಿಯಾಗಿ, ಆದರ್ಶಪ್ರಾಯರಾಗಿರುವುದು ರಾಜನಿಗೆ ಸಮನಲ್ಲವೇ!
ಹೆಸರನ್ನು ವಂಶ ಕೊಡಬಹುದು, ಆದರೆ ಗೌರವವನ್ನು ಸಾಧನೆ ಕೊಡುತ್ತದೆ. ಈ ಸಾಧನೆಯೇ ಎಲ್ಲರಲ್ಲಿ ಒಂದಾಗಿಯೂ ವಿಶಿಷ್ಟಸ್ಥಾನದ ಹಕ್ಕಿಗೆ ಗುರುತಿಸಲ್ಪಡುವುದು. ಇದು ಯಾವ ರಾಜನ ಮಗನಿಗೂ ಅವನ ಮಗನಾಗಿ ವಂಶಪರಂಪರೆಯಿಂದ ಪಡೆಯುವ ಸ್ಥಾನಮಾನಕ್ಕಿಂತ ಅಧಿಕ ಮೌಲ್ಯಯುತವಾದ ಸಾಧನೆಯೇ ಆಗಿರುತ್ತದೆ. ಇಲ್ಲಿ ವ್ಯಕ್ತಿಯ ವ್ಯಕ್ತಿತ್ವದ ಅಭ್ಯುದಯ ಉನ್ನತಿ ಕಾಣಬಹುದು. ಇದು ವಂಶದಿಂದಲ್ಲ ಅವನ ಸ್ವಂತ ವಿಶಿಷ್ಟ ವ್ಯಕ್ತಿತ್ವದ ಗಳಿಕೆಯಿಂದ ಮಾತ್ರ ಸಾಧ್ಯ.


