ವಿಜಯಪುರದಲ್ಲಿ ನಡೆದ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಇದೊಂದು ಮಹತ್ವಾಕಾಂಕ್ಷಿಯ ಕಾರ್ಯಕ್ರಮ ಜಿಲ್ಲೆಯಲ್ಲಿನ ಎಲ್ಲ ನರರೋಗ ಸಂಬಂಧಿತ ಕಾಯಿಲೆಗೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗ ಸಹಕಾರಿಯಾಗಲಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.
ಹಿಂದಿನ ಕಾಲದ ಜನರು ತಮ್ಮ ಜೀವನಶೈಲಿ ಚೆನ್ನಾಗಿ ಕಾಪಾಡಿಕೊಳ್ಳುತ್ತಿದ್ದರು. ಸಮಯಕ್ಕೆ ಸರಿಯಾಗಿ ಊಟ, ಕೆಲಸ ಕಾರ್ಯಗಳನ್ನು ನಿಯಮಿತವಾಗಿ ನಿರ್ವಹಿಸುತ್ತಿದ್ದರು. ಆ ಕಾರಣಕ್ಕಾಗಿ ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅವರಿಗೆ ಕಾಯಿಲೆಗಳು ಬಾಧಿಸುತ್ತಿರಲಿಲ್ಲ. ಇಂದಿನ ಪೀಳಿಗೆಯು ಜೀವನಶೈಲಿ ಬದಲಾಯಿಸಿಕೊಳ್ಳುವುದರ ಮೂಲಕ ಮೆದುಳು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ವಿಶ್ವ ಮೆದುಳು ದಿನಾಚರಣೆ ಅಂಗವಾಗಿ ಬುಧವಾರ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ ಅವರು ಮಾತನಾಡಿ, ನಮ್ಮ ಹಿರಿಯರ ಜೀವನ ಶೈಲಿ ಚೆನ್ನಾಗಿದ್ದರಿಂದ ಅವರಿಗೆ ಅಂದಾಜು ೬೦ ರಿಂದ ೬೫ ವರ್ಷದಲ್ಲಿ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗಿನ ಆಧುನಿಕ ಮತ್ತು ತಾಂತ್ರಿಕ ಜಗತ್ತಿನಲ್ಲಿ ನಮ್ಮ ಜೀವನಶೈಲಿಗಳು ತದ್ವಿರುದ್ದವಾಗಿದ್ದರಿಂದ ಈಗಿನ ೨೦-೨೫ರ ವಯಸ್ಸಿನ ಯುವಕರು ಮೆದುಳು ರೋಗ ಸಂಬಂಧಿಸಿದಂತೆ ಕಾಯಿಲೆಗೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮೆದುಳು ರೋಗಕ್ಕೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ. ಬಾಧಿತರು ಸದುಪಯೋಗ ಮಾಡಿಕೊಳ್ಳಬಹುದಾಗಿದೆ ಎಂದರು.
ಜಿಲ್ಲಾಸ್ಪತ್ರೆಯ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗದ ನರರೋಗ ತಜ್ಞ ಡಾ. ವಿರುಪಾಕ್ಷಪ್ಪ ಬಿರಾದಾರ ಮಾತನಾಡಿ, ಪ್ರತಿಯೊಬ್ಬರೂ ದಿನನಿತ್ಯ ಕನಿಷ್ಠ ೭ ರಿಂದ ೮ ಗಂಟೆ ನಿದ್ರೆ ಮಾಡಬೇಕು. ಉತ್ತಮ ಆಹಾರ ಪದ್ದತಿ ಹಾಗೂ ಉತ್ತಮ ಜೀವನಶೈಲಿ ರೂಢಿಸಿಕೊಂಡರೆ ಆರೋಗ್ಯಯುತವಾಗಿ ಇರಬಹುದು ಎಂದರು.
ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗದ ವಿಜಯಪುರ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ. ಅರ್ಚನಾ ಕುಲಕರ್ಣಿ, ಮನೋರೋಗ ತಜ್ಞ ಡಾ. ಮಂಜುನಾಥ ಮಸಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಆರ್ ಎಂಒ ಡಾ. ಕೆ. ಡಿ. ಗುಂಡಬಾವಡಿ, ಡಾ. ಮಹೇಶ ಮೋರೆ, ಡಾ. ದೇವಮಾನೆ, ಡಾ. ಮಂಜುನಾಥ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ. ಎಮ್. ಕೋಲೂರ, ಜಿಲ್ಲಾ ಸಂಯೋಜಕ ಆನಂದ ರಾಠೋಡ ಸೇರಿದಂತೆ ಜಿಲ್ಲಾಸ್ಪತ್ರೆಯ ಸಿಬ್ಬಂದಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಿಬ್ಬಂದಿ ಹಾಗೂ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ರವಿ ಕಿತ್ತೂರ ನಿರೂಪಿಸಿ, ವಂದಿಸಿದರು.

