– ಮಂಡ್ಯ ಮ.ನಾ.ಉಡುಪ
ವಾಲ್ಮೀಕಿ ರಾಮಾಯಣದಲ್ಲಿ ರಾವಣ ವಧೆಯ ನಂತರ
ನಡೆಯುವ ಪ್ರಸಂಗವಿದು. ರಾಮ, ಲಕ್ಷ್ಮಣ, ಸೀತೆ,
ಹನುಮಂತ ಎಲ್ಲರೂ ಅಯೋಧ್ಯೆಗೆ ಬರುತ್ತಾರೆ. ಭರತ
ಮತ್ತು ಶತೃಘ್ನರು ಪ್ರೀತಿಯಿಂದ ಎಲ್ಲರನ್ನೂ ಸ್ವಾಗತಿಸುತ್ತಾರೆ.
ಹೀಗೆ ಎಲ್ಲರೂ ಆನಂದದಿಂದ ಇರುವಾಗ ಲಕ್ಷ್ಮಣನು
ತನ್ನೊಳಗೆ ತಾನೇ ನಗುತ್ತಾನೆ. ಆ ಸಮಯದಲ್ಲಿ ಅಲ್ಲಿದ್ದ ಕೈಕೇಯಿ ತನ್ನ ಮನದಲ್ಲಿ ಅಂದುಕೊಳ್ಳುತ್ತಾಳೆ.
” ಅಂದು ರಾಮನನ್ನು ವನವಾಸಕ್ಕೆ ಕಳುಹಿಸಿ ಪತಿಯ ಸಾವಿಗೆ ಕಾರಣಳಾದ ನೀನು ಈ ದಿವಸ ನೀನು ರಾಮನನ್ನು ಸ್ವಾಗತಿಸುತ್ತೀಯಾ? “
ಎಂದು ಪರಿಹಾಸ್ಯಮಾಡಿ ನಗುತ್ತಿದ್ದಾನೆ ಎಂದುಕೊಂಡಳು. ವಿಭೀಷಣ ತನ್ನ ಮನಸ್ಸಿನಲ್ಲಿ
” ಮನೆಯ ಗುಟ್ಟನ್ನು ರಾಮನಿಗೆ ಹೇಳಿ ಲಂಕೆಗೆ ಕೇಡುಬಯಸಿ ಅಣ್ಣನನ್ನು ಕೊಲ್ಲಿಸಿ ಲಂಕಾಧಿಪತಿಯಾದೆನೆಂದು ?’ “
ನಗುತ್ತಿರಬಹುದು ಎಂದುಕೊಂಡನು.
ಸುಗ್ರೀವ ತನ್ನ ಮನಸ್ಸಿನಲ್ಲಿ
“ ಅಣ್ಣನನ್ನು ಮೋಸದಿಂದ ಕೊಂದು ರಾಜ್ಯ ಸಂಪಾದಿಸಿ
ರಾಮನ ಜೊತೆಯಲ್ಲಿ ಅನಂದದಿಂದ ಇರುವೆಯಾ “‘
ಎಂದು ಲಕ್ಷ್ಮಣ ಪರಿಹಾಸ್ಯ ಮಾಡಿ ನಗುತ್ತಿರಬಹುದು ಎಂದುಕೊಂಡನು.
ಸೀತೆ ತನ್ನ ಮನಸ್ಸಿನಲ್ಲಿ
“ ರಾಮ ಚಿನ್ನದ ಜಿಂಕೆ ತರಲು ಹೋದಾಗ ಮೂರುಗೆರೆಗಳನ್ನು ಎಳೆದು ಹೊರಬರಬೇಡವೆಂದು ಸಾರಿಸಾರಿ ಹೇಳಿದ್ದರೂ ತನ್ನ ದಾಟಿ ಮಾತು ಕೇಳದೇ ಬಂದಿರುವುದಕ್ಕೆ ತಾನೇ ರಾಮ-ರಾವಣ ಯುದ್ದಕ್ಕೆ ಕಾರಣವೆಂದು ಲಕ್ಷ್ಮಣ ತನ್ನನ್ನು ನೋಡಿ ನಗುತ್ತಿರಬಹುದು “
ಎಂದುಕೊಳ್ಳುತ್ತಾಳೆ ಸೀತೆ. ಶ್ರೀರಾಮಚಂದ್ರನು
“ ಸೀತೆ ಚಿನ್ನದ ಜಿಂಕೆ ಕೇಳಿದಾಗ ಅದು ರಾಕ್ಷಸ ಮಾಯೆಯೆಂದು ಗೊತ್ತಿದ್ದರೂ ಸಹ ಸೀತೆಗೆ ತಿಳಿಹೇಳದೇ ಮಾಯಾಜಿಂಕೆಯ ಹಿಂದೆ ಹೋಗಿರುವುದು ಬುದ್ದಿವಂತರ ಲಕ್ಷಣವಲ್ಲವೆಂದು ” ಲಕ್ಷ್ಮಣನು ನಗುತ್ತಿರಬಹುದು ಎಂದುಕೊಂಡನು.
ಮಂಥರೆಯು
“ಇಡೀ ತುಂಬು ಕುಟುಂಬಕ್ಕೆ ಹುಳಿಹಿಂಡಿ ಸಾಮರಸ್ಯ ಹಾಳು ಮಾಡಿದ ಪಾತಕಿ ಈಗ ಎಕೆ ಬಂದಿರುವಳೆಂದು’ ತನ್ನನ್ನು ನೋಡಿ ನಗುತ್ತಿರಬಹುದು “
ಎಂದುಕೊಂಡಳು.
ಹೀಗೆ ಎಲ್ಲರೂ ತಮ್ಮ ಕುರಿತೇ ಯೋಚಿಸುತ್ತಿರುವಾಗ ಕೌಸಲ್ಯ ಕೇಳುತ್ತಾಳೆ.
“ಮಗೂ ಲಕ್ಷ್ಮಣ ಹಾಗೇಕೆ ನಗುತ್ತಿರುವೆ? ಇಷ್ಟು ದೊಡ್ಡ ರಾಜ ಸಭೆಯಲ್ಲಿ ಒಬ್ಬನೇ ನಗುವುದು ಸರಿಯೇ? ನೀನು ಯಾರನ್ನು ನೋಡಿ ನಗುತ್ತಿರುವೆ? “
ಎಂದು ಲಕ್ಷ್ಮಣನನ್ನು ಕೇಳುತ್ತಾಳೆ. ಆಗ ಲಕ್ಷ್ಮಣ ಹೇಳುತ್ತಾನೆ
“ಅಮ್ಮಾ, ನಾನು ನಕ್ಕಿರುವುದು ಇಲ್ಲಿರುವ ಸಭಾಜನರನ್ನು ನೋಡಿ ಅಲ್ಲ. ನಾವು ಹದಿನಾಲ್ಕು ವರ್ಷ ವನವಾಸ ಮಾಡಿದೆವು. ಆ ಸಮಯದಲ್ಲಿ ಯಾವತ್ತೂ ನನ್ನ ಹತ್ತಿರ ಸುಳಿಯದ ನಿದ್ರೆ ಈ ದಿನ ಇಷ್ಟು ಆನಂದದ ಸಮಯದಲ್ಲಿ ನಿದ್ರೆಯು ಬಹುವಾಗಿ ಕಾಡುತ್ತಿರುವಾಗ ಈ ನಗು ಬಂದಿತು” ಎಂದನು.