ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಶಿವಾಜಿನಗರದಲ್ಲಿ ಮೊಹಮ್ಮದ್ ಮಾಜ್ ಎಂಬ ಪುಟ್ಟ ಬಾಲಕನನ್ನು ಯಾರೋ ದುಷ್ಕರ್ಮಿಗಳು ಮನೆಯಂಗಳದಿಂದ ಬುಧವಾರ ಬೆಳಗಿನ ಜಾವ ಅಪಹರಿಸಿದ ಘಟನೆ ನಡೆದಿದೆ.
ಅಪಹರಣಕ್ಕೀಡಾದ ಬಾಲಕ ವಿದ್ಯಾನಗರದ ನವಗ್ರಹ ಹತ್ತಿರ ವೆಲ್ಡಿಂಗ್ ಶಾಪ್ ನಡೆಸುತ್ತಿರುವ ಚಾಂದ ಶೇಕ್ ಅವರ ಪುತ್ರನೆಂದು ತಿಳಿದು ಬಂದಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಮಗು ಮನೆಯ ಮುಂದೆ ಆಟವಾಡುತ್ತಿದ್ದಾಗ ನೀಲಿ ಸೀರೆಯಲ್ಲಿ ಬಂದ ಇಳಿವಯಸ್ಸಿನ ಹೆಣ್ಣುಮಗಳು ಮಗುವನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ನಾಗರಿಕರು ವ್ಯಾಪಕ ಶೋಧ ನಡೆಸಿ, ಸ್ಥಳೀಯ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಅಪರಿಚಿತ ಮಹಿಳೆ ಮಗುವನ್ನು ಆಟವಾಡಿಸುತ್ತಿದ್ದುದು ತಿಳಿದು ಬಂದ ತಕ್ಷಣ ಪೊಲೀಸರು ಅಲ್ಲಿಗೆ ತೆರಳಿ ಅಪರಿಚಿತ ಮಹಿಳೆಯಿಂದ ಮಗುವನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಿದ್ದಾರೆ.
ಮಗುವನ್ನು ಅಪಹರಿಸಿದ ಮಹಿಳೆಯನ್ನು ಠಾಣೆಗೆ ತಂದು ವಿಚಾರಿಸಿದಾಗ ಆ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.

