ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಣ, ಆರೋಗ್ಯ, ಸಮಾಜ ಸೇವೆಯ ಮೂಲಕ ಮನೆಮಾತಾಗಿರುವ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ಇದೀಗ ಮಾಧ್ಯಮ ಕ್ಷೇತ್ರಕ್ಕೂ ಮುಂದಡಿ ಇಟ್ಟಿದೆ. ಜಿಲ್ಲೆಯ ಜನರಿಗೆ ಎಫ್. ಎಂ. ರೇಡಿಯೂ ಮೂಲಕ ಮತ್ತಷ್ಟು ಹತ್ತಿರವಾಗಲು ಸಂಸ್ಥೆ ಈಗ ಬಿ.ಎಲ್.ಡಿ.ಇ ಧ್ವನಿ 98.6 ಎಫ್.ಎಂ ಸಮುದಾಯ ರೇಡಿಯೋ ಕೇಂದ್ರ ಪ್ರಾರಂಭಿಸಿದೆ.
ರೈತರು, ಮಹಿಳೆಯರು, ಯುವಕರು ಹಾಗೂ ಸಮಾಜದ ನಾನಾ ಸ್ತರದ ಜನರನ್ನು ಕೇಂದ್ರೀಕರಿಸಿ ಅನೇಕ ಕಾರ್ಯಕ್ರಮಗಳನ್ನೂ ಈ ಬಾನುಲಿ ಕೇಂದ್ರ ಸಿದ್ಧಪಡಿಸಿದ್ದು, ಇದೇ ಡಿಸೆಂಬರ್ 7 ರಂದು ಲೋಕಾರ್ಪಣೆಯಾಗಲು ಸಿದ್ಧವಾಗಿದ್ದು, ಡಿಸೆಂಬರ್ 7 ರಂದು ರವಿವಾರ ಬೆಳಿಗ್ಗೆ 10.30ಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ, ಅರಣ್ಯ ಮತ್ತು ಪರಿಸರ ವಿಜ್ಞಾನ ಸಚಿವ ಈಶ್ವರ ಖಂಡ್ರೆ ಸಮುದಾಯ ಬಾನುಲಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ಸಮುದಾಯಗಳ ಸಮಸ್ಯೆಗಳು ಮತ್ತು ಮತ್ತು ಆ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವೇದಿಕೆಯಾಗಿ ಈ ಬಾನುಲಿ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಬೇರೆ ಬೇರೆ ಕ್ಷೇತ್ರಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಈ ಕೇಂದ್ರದ ಮೂಲಕ ಪ್ರಚಲಿತ ವಿದ್ಯಮಾನಗಳು, ಭವಿಷ್ಯದ ಸವಾಲುಗಳು, ಅವುಗಳಿಗೆ ಪರಿಹಾರಗಳನ್ನು ಒಗಗಿಸುವ ಕೆಲಸವನ್ನು ಮಾಡಲಿದೆ. ಜಲ, ವೃಕ್ಷ, ಶಿಕ್ಷಣ, ಆರೋಗ್ಯ ಈ ಕೇಂದ್ರದ ಪ್ರಮುಖ ಧ್ಯೋಯೋದ್ದೇಶಗಳಾಗಿದ್ದು, ಎಲ್ಲ ಸಮುದಾಯಗಳನ್ನು ತಲುಪುವ ಮೂಲಕ ಅಭಿವೃದ್ಧಿಗೆ ಹೊಸ ಧ್ವನಿಯಾಗುವ ಗುರಿ ಹೊಂದಿದೆ.
ರೇಡಿಯೋ ಬಳಕೆದಾರರು 98.6 FM ಟ್ಯೂನ್ ಮಾಡಬಹುದು ಅಥವಾ ಬಿ.ಎಲ್.ಡಿ.ಇ ಧ್ವನಿ ಎಂಬ ಆಪ್ ಅನ್ನು ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್ ಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ. ಈ ಬಾನುಲಿ ಕೇಂದ್ರದ ತರಂಗವೂ 22 ಕಿ. ಮೀ. ವರೆಗೆ ವ್ಯಾಪ್ತಿಯನ್ನು ಹೊಂದಿದ್ದು, ಬೆಳಿಗ್ಗೆ 6.30 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಾನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಆ್ಯಪ್ ಗಳ ಮೂಲಕ ಮೂಲಕ ದಿನದ 24 ಗಂಟೆ, ವಾರದ 7 ದಿನಗಳು ಪ್ರಪಂಚದಾದ್ಯಂತ ಕೇಳಬಹುದಾಗಿದೆ.
ಕನ್ನಡ, ಹಿಂದಿ ಚಿತ್ರಗೀತೆ, ಭಕ್ತಿಗೀತೆ, ಜನಪದ ಗೀತೆಗಳು ಸೇರಿದಂತೆ ಶುಭ ನುಡಿ ವಿಥ್ ಶುಭಾ, ಶುಭಾ ದಿನಕ್ಕೊಂದು ಶುಭಾಶಯ, ಯೂಥ್ ಜೋನ್, ಸಖಿ, ಮಣ್ಣಿನ ಮಾತು, ಸದ್ದು ಮಾಡಿದ ಸುದ್ಧಿ, ಮೂವಿ ಮಾತು ವಿಥ್ ಮಹಾಂತೇಶ, ನೆನಪುಗಳ ಮಾತು ವಿಥ್ ಮುತ್ತುರಾಜ ಎಂಬ ಕಾರ್ಯಕ್ರಮಗಳು ಪ್ರಸಾರವಾಗಲಿವೆ.
ಮಣ್ಣಿನ ಮಾತು ಕಾರ್ಯಕ್ರಮದಲ್ಲಿ ಸ್ಥಳೀಯ ರೈತರಿಕೆ ಕೃಷಿ ಮಾಹಿತಿ ಒದಗಿಸಲಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಕೃಷಿಯಲ್ಲಿ ಆಗುತ್ತಿರುವ ಬದಲಾವಣೆ, ಅನ್ನದಾತರು ಅಳವಡಿಸಿಕೊಳ್ಳುತ್ತಿರುವ ನಾವಿನ್ಯ ತಂತ್ರಜ್ಞಾನ, ಅಭಿವೃದ್ಧಿ ಕುರಿತ ಮಾಹಿತಿ ಹಾಗೂ ಕೃಷಿ ವಿಜ್ಞಾನಿಗಳಿಂದ ಬೆಳೆಗಳ ಕುರಿತು ವೈಜ್ಞಾನಿಕ ಸಲಹೆ ಸೂಚನೆ ನೀಡುವುದು, ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ಒದಗಿಸುವುದು, ಸ್ಥಳೀಯ ರೈತರ ಅನುಭವ ಹಂಚಿಕೆಗೆ ಮಣ್ಣಿನ ಮಾತು ಕಾರ್ಯಕ್ರಮ ವೇದಿಕೆ ಒದಗಿಸಲಿದೆ.
ಯುವಕರಿಗಾಗಿ ಯೂಥ್ ಜೋನ್ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಆರೋಗ್ಯ, ಪರಿಸರ ಕುರಿತಂತೆ ಜಾಗೃತಿ ಮೂಡಿಸುವುದು, ಉದ್ಯೋಗಾವಕಾಶ, ಕೌಶಲ್ಯ ಅಭಿವೃದ್ಧಿ ವಿಷಯಗಳು ಸೇರಿದಂತೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆಗಳ ಬಗ್ಗೆ ಯುವಕರಲ್ಲಿ ಹುದುಗಿರುವ ಕಲೆಗಳಿಗೆ ಅವಕಾಶ ಕಲ್ಪಿಸುವುದು, ತಾಂತ್ರಿಕ ಯುಗದಲ್ಲಿ ಆಗುತ್ತಿರುವ ನಾವಿನ್ಯ ತಂತ್ರಜ್ಞಾನ ಅಭಿವೃದ್ಧಿ ಮಾಹಿತಿ ಮತ್ತು ಸೈಬರ್ ಕ್ರೈಂ ಸೇರಿದಂತೆ ಅಂತರ್ಜಾಲ ಆಧಾರಿತ ಅಪರಾಧಿ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಪ್ರಸಾರವಾಗಲಿವೆ.
ಮಹಿಳೆಯರಿಗಾಗಿ ಸಖಿ ಕಾರ್ಯಕ್ರಮ ರೂಪಿಸಲಾಗಿದ್ದು, ಇಲ್ಲಿ ಸ್ತ್ರೀಯರ ಆರೋಗ್ಯ, ಹಣ ಉಳಿತಾಯ ಮತ್ತು ಪೌಷ್ಠಿಕ ಅಹಾರಗಳ ಕುರಿತ ಕಾರ್ಯಕ್ರಮಗಳು, ಮಹಿಳೆಯರು ಮನೆಯಲ್ಲಿ ನಿರ್ವಹಿಸಬಹುದಾದ ಗುಡಿ ಕೈಗಾರಿಕೆಗಳ ಮಾಹಿತಿ, ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಪೂರಕ ವಿಷಯರನ್ನು ಚರ್ಚೆಗಳ ಕಾರ್ಯಕ್ರಮಗಳೂ ಪ್ರಸಾರವಾಗಲಿವೆ.
ರೇಡಿಯೋ ಕಾರ್ಯಕ್ರಮಗಳು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿದ್ದು ಕಾರ್ಯಕ್ರಮಗಳ ಮಾಹಿತಿ ತಿಳಿಯಬಹುದು.

