ಸಿಂದಗಿ ವಿರಕ್ತ ಮಠದ ಆಸ್ತಿಯ ದಾಖಲೆಗಳಿಂದ ವಕ್ಫ ಬೋರ್ಡ ಹೆಸರು ಕಡಿತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸತತ ೫೧ ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿದೆ. ಪರಿಣಾಮ ನಮ್ಮ ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯು ಮರಳಿ ಮಠದ ಹೆಸರಿಗಾಗಿದೆ ಎಂದು ಸಂತೋಷವನ್ನು ಪತ್ರಕರ್ತರೊಂದಿಗೆ ಗುರುಬಸವ ವಿರಕ್ತಮಠದ ಸೇವಾ ಸಮಿತಿಯ ಕಾರ್ಯದರ್ಶಿ ನಿಂಗಪ್ಪ ಗುರುಬಸಪ್ಪ ಪಟ್ಟಣಶೆಟ್ಟಿ ಇವರು ಹಂಚಿಕೊಂಡರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯನ್ನು ೧೯೭೪ರಲ್ಲಿ ಅನಧಿಕೃತವಾಗಿ ವಕ್ಫ ಬೋರ್ಡ ತನ್ನ ಹೆಸರಿಗೆ ಮಾಡಿಕೊಂಡಿತ್ತು. ಇದರ ಬಗ್ಗೆ ಸಾಕಷ್ಟು ಹೋರಾಟ ಮಾಡಲಾಗಿ ಕಳೆದ ೨೦೨೪ರಲ್ಲಿ ರಾಜ್ಯಾದ್ಯಾಂತ ವಕ್ಫ್ಬೋರ್ಡ ವಿರುದ್ಧ ಸಾಕಷ್ಟು ಹೋರಾಟಗಳು ನಡೆದವು. ಆ ಸಂದರ್ಭದಲ್ಲಿ ನಮ್ಮ ಮಠದ ೬೦೦ವರ್ಷಗಳ ಇತಿಹಾಸದ ದಾಖಲೆಗಳನ್ನು ಸರ್ಕಾರದ ಮುಂದಿಟ್ಟಾಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳು, ಇಂಡಿ ಉಪವಿಭಾಗಾಧಿಕಾರಿಗಳ ಅವರ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ವ್ಯಾಜ್ಯ ನಡೆಸಲಾಯಿತು.
ಸದರಿ ಪ್ರಕರಣದಲ್ಲಿ ಪಕ್ಷಗಾರರಾಗಿ ಸಿಂದಗಿ ವಿರಕ್ತಮಠ ಸೇವಾ ಸಮಿತಿ ವಿರಕ್ತಮಠ ಸಿಂದಗಿ (ಬಿಳೂರ) ಗೌರವಾಧ್ಯಕ್ಷ, ಶ್ರೀಮ.ನಿ.ಪ್ರ.ಗುರುಬಸವ ಚನ್ನಬಸವ ಮಹಾಸ್ವಾಮಿಗಳು ಪ್ರಕರಣದಲ್ಲಿ ಪಾರ್ಟಿಗಳಾಗಿ ೧) ಸಿಂದಗಿ ತಹಶೀಲ್ದಾರ, ೨) ಕಂದಾಯ ನಿರೀಕ್ಷಕರು ೩) ಗ್ರಾಮ ಆಡಳಿತ ಅಧಿಕಾರಿ ೪) ವಿಜಯಪುರ ಜಿಲ್ಲಾ ವಕ್ಫ್ಬೋರ್ಡ ಆಗಿದ್ದರು. ಈ ಪ್ರಕರಣ ದಿನಾಂಕ: ೧೯-೧೨-೨೦೨೪ರಂದು ದಾಖಲಾಗಿತ್ತು. ಪ್ರಕರಣ ಸಂ: ಆರ್‌ಟಿಎಸ್:ಎಪಿ:೧೨೨/೨೦೨೪-೨೫ ಅಂತ ಇರುತ್ತದೆ. ಸದರಿ ಪ್ರಕರಣ ಸತತ ೧೧ತಿಂಗಳಿನಿಂದ ವಾದಿ ಪ್ರತಿವಾದಗಳು ನಡೆದು ಕೊನೆಗೆ ದಿನಾಂಕ: ೨೮/೧೧/೨೦೨೫ ರಂದು ಸದರಿ ವಿರಕ್ತಮಠದ ಆಸ್ತಿಯನ್ನು ವಕ್ಫಬೋರ್ಡನಿಂದ ಮುಕ್ತಗೊಳಿಸಿ ಶ್ರೀಮಠದ ಆಸ್ತಿಯನ್ನು ಮರಳಿ ಮಠಕ್ಕೆ ಸಂಬಂಧಿಸಿದ ಆಸ್ತಿ ಈ ಆಸ್ತಿಗೂ ವಕ್ಫಬೋರ್ಡಗೂ ಯಾವುದೇ ಸಂಬಂಧವಿಲ್ಲ ಎಂದು ಮಾನ್ಯ ನ್ಯಾಯಾಲಯ ಆದೇಶಿಸಿದೆ (ಆದೇಶ ಸಂಖ್ಯೆ :ಆರ್‌ಡಿ೦೦೫೦೦೦೬೮೪೨೮೬) ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

