ಇಂದು (ಡಿಸೆಂಬರ್ ೦೪) ಗಾಣಗಾಪುರ ದತ್ತ ಜಯಂತಿ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಪ್ರಶಾಂತ ಕುಲಕರ್ಣಿ
ಉಪನ್ಯಾಸಕರು
ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ
ಸಿಂದಗಿ
ವಿಜಯಪುರ ಜಿಲ್ಲೆ
Ph:9845442237
ಉದಯರಶ್ಮಿ ದಿನಪತ್ರಿಕೆ
ದತ್ತಾತ್ರೇಯರು ಭಾರತೀಯ ಸಂಪ್ರದಾಯದಲ್ಲಿ “ಆದಿಗುರು” ಮತ್ತು “ಅವಧೂತ ಚಿಂತನೆಯ ಪರಮಮೂರ್ತಿ” ಎಂದು ಪೂಜಿಸಲ್ಪಡುವ ಮಹಾಯೋಗಿಗಳು. ದತ್ತಸ್ವರೂಪವು ಕೇವಲ ದೈವಿಕ ರೂಪವಲ್ಲ; ಅದು ಪ್ರಕೃತಿಗತವಾಗಿ ಪರಮಸತ್ಯದಲ್ಲಿ ಲೀನವಾಗಿರುವ ಅವಧೂತ ಸ್ಥಿತಿಯ ಜೀವಂತ ಉದಾಹರಣೆ. ಅವಧೂತ ಎಂದರೆ ದೇಶ–ಕಾಲ–ಸಂಸ್ಕೃತಿ–ಕರ್ಮ– ಬಯಕೆ ಎಂಬ ಎಲ್ಲಾ ಬಂಧನಗಳನ್ನು ತೊರೆದು, ಮನುಷ್ಯನು ತನ್ನೊಳಗಿನ ಪರಬ್ರಹ್ಮದ ಜ್ಞಾನದಲ್ಲಿ ನಿರಂತರವಾಗಿ ನೆಲೆಸಿರುವ ಸ್ಥಿತಿ. ಈ ಕಾರಣಕ್ಕಾಗಿ ದತ್ತ ಆಚಾರ್ಯರನ್ನು “ಅವಧೂತ ಚಿಂತನೆಯ ಮಹಾಶಕ್ತಿ” ಹಾಗೂ “ಆದಿಗುರು” ಎಂದೂ ಭಕ್ತರು ಗೌರವಿಸುತ್ತಾರೆ.

ದತ್ತನ ತತ್ತ್ವ ಭಾರತದಲ್ಲಿನ ಅನೇಕ ಸಂಪ್ರದಾಯಗಳಿಗೆ ಮೂಲಶಕ್ತಿ. ವಿಶೇಷವಾಗಿ ನಾಥಪಂಥದಲ್ಲಿ ದತ್ತಾತ್ರಯರು ಮೂಲ ಪ್ರೇರಕತ್ವ ವಹಿಸಿರುವುದಾಗಿ ಪರಂಪರೆ ಹೇಳುತ್ತದೆ. ದತ್ತನ ಆದೇಶದಿಂದಲೇ ರೂಪುಗೊಂಡ ನಾಥಸಂಪ್ರದಾಯದಲ್ಲಿ ಹಠಯೋಗ, ಧ್ಯಾನ, ಗುರು ಶಿಷ್ಯ ಭಕ್ತಿ ಮತ್ತು ಅವಧೂತ ತತ್ತ್ವಗಳಿಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದೆ. ನಾಥಪಂಥದ ಶ್ರೇಷ್ಠ ಪರಂಪರೆಯಾಗಿ ನವನಾಥರು ಜನಪ್ರಿಯ. ನವ ಎಂದರೆ ಒಂಭತ್ತು, ಮತ್ತು ಈ ಒಂಭತ್ತು ಮಹಾಯೋಗಿಗಳು ನವನಾಥರು ಎಂದು ಪ್ರಸಿದ್ಧರಾದರು. ಅವರು
ಮತ್ಸ್ಯೇಂದ್ರನಾಥ,ಗೋರಕ್ಷನಾಥ, ಜಲಂಧರನಾಥ, ಸಿದ್ಧನಾಥ,
ಚರಣನಾಥ, ಕನಿಪಾನಾಥ,
ಗಹನಿನಾಥ, ಭರತನಾಥ
ಮತ್ತು ರೇವಣನಾಥ.
ಈ ಎಲ್ಲ ನವನಾಥರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಪಸ್ಸು, ಯೋಗ, ಅವಧೂತ ಜೀವನ ಹಾಗೂ ದತ್ತಚಿಂತನೆಗಳನ್ನೇ ಜೀವಂತಗೊಳಿಸಿದರು. ಅವರ ಶಿಷ್ಯಪರಂಪರೆ ಭಾರತದೆಲ್ಲೆಡೆ ಇಂದು ಕೂಡ ಬದುಕಿದ್ದು, ದತ್ತಸಂಪ್ರದಾಯದ ದೈವಭಕ್ತಿಯನ್ನು ಇನ್ನೂ ಗಟ್ಟಿಗೊಳಿಸಿದೆ.
ದತ್ತನ ತತ್ತ್ವವನ್ನು ಜನಮಾನಸಕ್ಕೆ ಹತ್ತಿರ ಮಾಡಲು ಅತ್ಯಂತ ಮಹತ್ವದ ಪಾತ್ರ ವಹಿಸಿದವರು ದತ್ತನ ಅವತಾರರಾದ ಶ್ರೀಪಾದ ಶ್ರೀವಲ್ಲಭ ಮತ್ತು ಶ್ರೀ ನರಸಿಂಹ ಸರಸ್ವತಿ ಸ್ವಾಮಿಗಳು. ಇವರ ದಿವ್ಯಜೀವನ, ಮೌನೋಪದೇಶ, ಸೇವೆ ಹಾಗೂ ದತ್ತಭಕ್ತರ ಪಾರಿತೋಷಿಕ ಎಲ್ಲವು ಶ್ರೀಗುರುಚರಿತ್ರೆ. ಈ ಗ್ರಂಥವೇ ಗಾಣಗಾಪುರದ ಮಹಿಮೆ, ದತ್ತನ ಅವಧೂತ ಚಿಂತನೆ ಹಾಗೂ ಗುರುಸೇವೆಯ ಪಾವಿತ್ರ್ಯವನ್ನು ವಿಶ್ವಾದ್ಯಂತ ಹರಡಿದೆ.
ಶ್ರೀ ನರಸಿಂಹ ಸರಸ್ವತಿ ಸ್ವಾಮಿಗಳು ಸುಮಾರು 23 ವರ್ಷಗಳ ಕಾಲ ಗಾಣಗಾಪುರದಲ್ಲಿ ವಾಸವಿದ್ದು, ಈ ನೆಲಕ್ಕೆ ಪರಮ ಪವಿತ್ರತೆಯನ್ನು ನೀಡಿದರು. ಅನೇಕ ಭಕ್ತರ ಜೀವನದಲ್ಲಿನ ನೋವು–ಅಳಲು–ಸಂಕಟವನ್ನು ಪರಿಹರಿಸಿದ ಘಟನೆಗಳು ಸ್ಥಳೀಯವಾಗಿ ನೂರಾರು ವರ್ಷಗಳಿಂದ ಸ್ಮರಣೆಯಾಗಿ ಉಳಿದಿವೆ.
ಗಾಣಗಾಪುರಕ್ಕೆ ಬಂದ ಯಾತ್ರಿಕರು ಮೊದಲಿಗೆ ಭೇಟಿ ನೀಡುವ ತೀರ್ಥವೆಂದರೆ ಭೀಮಾ–ಅಮರ್ಜಾ ಸಂಗಮ. ಈ ಪವಿತ್ರ ಜಲಸಂಗಮವನ್ನು “ಪಾಪನಾಶಿನಿ” ಹಾಗೂ “ಶಾಂತಿದಾತ್ರೀ” ಎಂದು ಭಕ್ತರು ಕೊಂಡಾಡುತ್ತಾರೆ. ಜಲಸ್ಪರ್ಶದ ಕ್ಷಣದಲ್ಲಿ ಮನಸ್ಸಿಗೆ ದೊರೆಯುವ ಶಾಂತಿ ಅನೇಕ ಭಕ್ತರ ಅನುಭವದಲ್ಲಿ ಜೀವಂತ.
ಸಂಗಮದ ನಂತರ ಯಾತ್ರಿಕರು ತೆರಳುವುದು ನಿರ್ಗುಣ ಮಠಕ್ಕೆ—ಗಾಣಗಾಪುರದ ಆಧ್ಯಾತ್ಮಿಕ ಹೃದಯ. ಇಲ್ಲಿ ದತ್ತನ ವಿಗ್ರಹವಿಲ್ಲ; ಪಾದುಕೆಯೇ ದೈವ. “ನಿರ್ಗುಣ ದತ್ತ” ಎಂಬ ಪರಿಕಲ್ಪನೆ ರೂಪಕ್ಕಿಂತ ತತ್ತ್ವ ಶ್ರೇಷ್ಠ ಎಂಬ ಸಂದೇಶ ನೀಡುತ್ತದೆ. ಪಾದುಕೆಗೆ ಜಲಾಭಿಷೇಕ ಮಾಡದಿರುವುದು ದತ್ತನ ಅವಧೂತ ಚಿಂತನೆಯನ್ನು ಸೂಚಿಸುತ್ತದೆ.ಶುದ್ಧ ತತ್ತ್ವಕ್ಕೆ ಹೊರಗಿನ ಆಚರಣೆಗಿಂತ ಒಳಗಿನ ಶರಣಾಗತಿ ಮುಖ್ಯ. ಅಷ್ಟಗಂಧ–ಕೇಸರಿ ಲೇಪನದ ಪರಂಪರೆ ದತ್ತಸಾನ್ನಿಧ್ಯವನ್ನು ಭಕ್ತರ ಹೃದಯದಲ್ಲಿ ಮೃದುವಾಗಿ ಬೆಳಗಿಸುತ್ತದೆ.
ಮಠದ ಆವರಣದಲ್ಲಿರುವ ಅಶ್ವತ್ಥ ವೃಕ್ಷ, ತುಲಸೀ ವೃಂದಾವನ, ನಾಗನಾಥ, ಹನುಮಂತ ಎಲ್ಲವು ದೈವಿ ಕಲೆ ತಂದಿದೆ. ಬೆಳಿಗ್ಗೆಯಿಂದ ನಿತ್ಯೋಪಾಸನೆ, ಮಧ್ಯಾಹ್ನ ಮಹಾನೈವೇದ್ಯ ಹಾಗೂ ಸಂಜೆ ಪಲ್ಲಕ್ಕಿ ಉತ್ಸವ.ಗುರುವಾರದ ಪಲ್ಲಕ್ಕಿ ಸೇವೆ ವಿಶೇಷವಾಗಿ ಭಕ್ತರ ಅನುಭವದಲ್ಲಿ ದತ್ತನ ಜಾಗೃತ ಸಾನ್ನಿಧ್ಯವೆಂದು ಪರಿಗಣಿಸಲಾಗಿದೆ.
ಗಾಣಗಾಪುರದ ಅನನ್ಯ ಆಚರಣೆಯೇ ಮಧುಕರಿ ವ್ರತ. ಶ್ರೀಗುರುಚರಿತ್ರೆಯ ಪ್ರಕಾರ, ಶ್ರೀಗುರು ಪ್ರತಿದಿನ ಭಿಕ್ಷೆ ಮಾಡುತ್ತಿದ್ದರು. ಅವರ ಪರಂಪರೆಯಲ್ಲಿ ಮಧುಕರಿ ಕೇವಲ ಆಹಾರಸಂಗ್ರಹವಲ್ಲ; ಅದು ವಿನಯಾಭ್ಯಾಸ, ಅಹಂಕಾರದ ಶಮನ ಮತ್ತು ಶರಣಾಗತಿಯ ಅಭಿವ್ಯಕ್ತಿಯೇ ಆಗಿದೆ. ಕೊಡುವವರಲ್ಲಿ ದತ್ತನ ರೂಪ; ಸ್ವೀಕರಿಸುವವರಲ್ಲಿ ಶರಾಣಾಗತಿ ಇದೇ ಮಧುಕರಿಯ ಹೃದಯ.
ದತ್ತಭಕ್ತರ ಪ್ರಧಾನ ಆಚರಣೆಯೇ ಶ್ರೀಗುರು ದತ್ತಾತ್ರೇಯ ಜಯಂತಿ. ಪ್ರತಿ ವರ್ಷ ಮಾರ್ಗಶಿರ ಮಾಸ ಶುಕ್ಲಪಕ್ಷ ಚತುರ್ದಶಿಯ ದಿನ, ಅಂದರೆ ಹೊಸ್ತಿಲ ಹುಣ್ಣಿಮೆಂದು ಕರೆಯುವ ದಿನದಂದು ದತ್ತ ಜಯಂತಿ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ದತ್ತನ ಜನ್ಮ ಮಧ್ಯಾಹ್ನದಲ್ಲಿ ಸಂಭವಿಸಿದೆ ಎನ್ನುವ ನಂಬಿಕೆ ಇರುವುದರಿಂದ ಈ ದಿನ ತೊಟ್ಟಿಲು, ಜಾತಕಪೂಜೆ, ಪಾರಾಯಣ, ಭಜನೆ, ಪ್ರವಚನ, ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರು ಹಮ್ಮಿಕೊಳ್ಳುತ್ತಾರೆ.
ಗಾಣಗಾಪುರಕ್ಕೆ ಬರುವವರ ಉದ್ದೇಶ ಭಿನ್ನವಾಗಿರಬಹುದು,
ಪಾಪಪರಿಹಾರ, ರೋಗನಿವಾರಣ, ಕುಟುಂಬ ಸಂಕಟ, ಅಥವಾ ಮನೋಭಾರ ತಗ್ಗಿಸಿಕೊಳ್ಳುವುದು.
ಆದರೆ ಗಾಣಗಾಪುರ ನೀಡುವುದು ತಕ್ಷಣದ ಫಲವಲ್ಲ;
ಭಯವನ್ನು ಕರಗಿಸುವ ಧೈರ್ಯ, ಬದುಕಿನ ನೋವನ್ನು ತಾಳುವ ಶಕ್ತಿ, ಮನಸ್ಸಿಗೆ ನೆಮ್ಮದಿ ನೀಡುವ ಮೌನಕೃಪೆ.
ಈ ಕಾರಣಕ್ಕೆ ಗಾಣಗಾಪುರವನ್ನು “ಜಾಗೃತ ಕ್ಷೇತ್ರ” ಎಂದು ಭಕ್ತರು ವಿಶ್ವಾಸಪೂರ್ವಕವಾಗಿ ಕರೆಯುತ್ತಾರೆ.
ದತ್ತನ ತತ್ತ್ವ ಪುರಾಣಗಳಲ್ಲಿ ಮಾತ್ರವಲ್ಲ,
ಭಕ್ತರ ಹೃದಯದಲ್ಲೂ ಪ್ರತಿದಿನ ಜೀವಂತವಾಗಿದೆ.
ಗಾಣಗಾಪುರದಲ್ಲಿ ದತ್ತನ ದರ್ಶನ ಕಣ್ಣಿಗೆ ಕಾಣದಾಗಿಯೂ, ಮನಸ್ಸಿಗೆ ಸ್ಪಷ್ಟವಾಗಿ ಅನುಭವವಾಗುತ್ತದೆ.
ಅದೇ ಅವಧೂತ ದತ್ತತತ್ತ್ವದ ಚಮತ್ಕಾರ,
ಅದೇ ಗಾಣಗಾಪುರದ ಮಹಿಮೆ.

