ಬಸವನಬಾಗೇವಾಡ: ಸಮಾನತೆ ಸಂಕೇತವಾಗಿ ವಿಶ್ವಗುರು ಬಸವಣ್ಣ, ಸ್ವಾತಂತ್ರ್ಯದ ಸಂಕೇತವಾಗಿ ಕಿತ್ತೂರು ರಾಣಿ ಚನ್ನಮ್ಮ ನಮ್ಮ ಕಣ್ಣು ಮುಂದೆ ಈ ಮಹನೀಯರು ನಿಲ್ಲುತಾರೆ. ಇಂತಹ ಮಹನೀಯರ ಆದರ್ಶಗಳನ್ನು ಎಲ್ಲರಿಗೂ ಅಗತ್ಯವಿದೆ ಎಂದು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ಅರಳಿಚಂಡಿ ಗ್ರಾಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಅರಳಿಚಂಡಿ ಗ್ರಾಮ ಘಟಕವು ಶನಿವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತೋತ್ಸವ ಹಾಗೂ ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿ ಹೋರಾಟದ ಹಕ್ಕೋತ್ತಾಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕಿತ್ತೂರು ರಾಣಿ ಚನ್ನಮ್ಮ ಒಂದು ಜನಾಂಗದ ಸ್ವತ್ತಲ್ಲ. ಅವಳು ಇಡೀ ಸಮುದಾಯದ ಸ್ವತ್ತು. ಅವಳ ಸಂಸ್ಥಾನದಲ್ಲಿ ೧೮ ಜಾತಿಕ್ಕೆ ಸೇರಿದ ವೀರಯೋಧರು ಇದ್ದರು. ಆ ವೀರಯೋಧರ ಸಹಾಯದಿಂದ ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ಇತಿಹಾಸ. ಹಾಲುಮತಕ್ಕೆ ಸೇರಿದ ಸಂಗೊಳ್ಳಿ ರಾಯಣ್ಣ ಚನ್ನಮ್ಮಳಿಗೆ ಮಾನಸ ಪುತ್ರರಾಗಿದ್ದರು. ಸರ್ಕಾರ ರಾಣಿ ಚನ್ನಮ್ಮಳ ಜಯಂತೋತ್ಸವವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಜಾರಿಗೆ ತಂದ ನಂತರ ಎಲ್ಲ ಸಮಾಜ ಬಾಂಧವರು ಕೂಡಿಕೊಂಡು ಆಚರಣೆ ಮಾಡುವಂತಾಗಿದೆ. ರಾಜ್ಯದ ಎಲ್ಲ ಭಾಗಕ್ಕೂ ರಾಣಿ ಚನ್ನಮ್ಮಳ ಇತಿಹಾಸ ತಲುಪುವಂತಾಗಿದೆ. ಇಡೀ ರಾಜ್ಯಕ್ಕೆ ಕಿತ್ತೂರು ಆಡಳಿತ ಮಾದರಿಯಾಗಿದೆ. ಚನ್ನಮ್ಮಳ ತವರು ಊರಾದ ಆಹೇರಿ-ಜಂಬಗಿ ಗ್ರಾಮದಲ್ಲಿ ಸರ್ಕಾರ ಚನ್ನಮ್ಮಳ ಸ್ಮಾರಕ ನಿರ್ಮಿಸಿ ಅಭಿವೃದ್ದಿ ಪಡಿಸಬೇಕೆಂದರು.
ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಪಂಚಮಸಾಲಿ ಸಮಾಜದಲ್ಲಿ ಸಾಕಷ್ಟು ಬಡವರು ಇದ್ದಾರೆ. ಈ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದರೆ ಯುವಜನಾಂಗಕ್ಕೆ ಶಿಕ್ಷಣಕ್ಕೆ ಸಾಕಷ್ಟು ನೆರವಾಗುತ್ತದೆ ಎಂಬ ಉದ್ದೇಶದಿಂದ ೨ಎ ಮೀಸಲಾತಿ ಸರ್ಕಾರ ಕೊಡಬೇಕೆಂದು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ವಿವಿಧ ರೀತಿಯ ಹೋರಾಟ ಮಾಡುತ್ತಾ ಬರಲಾಗುತ್ತಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ಬಿಜೆಪಿ ಸರ್ಕಾರ ನಮ್ಮ ಸಮಾಜಕ್ಕೆ ೨ಡಿ ಮೀಸಲಾತಿ ನೀಡುವುದಾಗಿ ಹೇಳಿತ್ತು. ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ನಂತರ ಅದು ಜಾರಿಗೆ ಬರಲಿಲ್ಲ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ. ನೂತನ ಸರ್ಕಾರಕ್ಕೂ ನಮ್ಮ ಹೋರಾಟದ ಮನವಿ ಸಲ್ಲಿಸಲಾಗಿದೆ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಮುನ್ನವೇ ನಮ್ಮ ಸಮಾಜಕ್ಕೆ ಮೀಸಲಾತಿ ಕುರಿತು ಸರ್ಕಾರ ಕ್ರಮ ವಹಿಸಬೇಕು. ಸಚಿವ ಶಿವಾನಂದ ಪಾಟೀಲ ಸೇರಿದಂತೆ ಅನೇಕರಿಗೆ ನಮ್ಮ ಮನವಿ ಸಲ್ಲಿಸಲಾಗಿದೆ. ನಮ್ಮ ಸಮುದಾಯಕ್ಕೆ ಸೇರಿದ ಸಚಿವರಾದ ಶಿವಾನಂದ ಪಾಟೀಲ, ಲಕ್ಷ್ಮೀ ಹೆಬಾಳ್ಕರ್ ಅವರು ಸಿಎಂ ಜೊತೆ ಚರ್ಚಿಸಿ ನಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡುವ ವಿಶ್ವಾಸವಿದೆ ಎಂದರು.
ಈ ಭಾಗದ ಶಾಸಕ, ಸಚಿವ ಶಿವಾನಂದ ಪಾಟೀಲ ಎಂದಿಗೂ ವೈಯಕ್ತಿಕ ಗೌರವ ನಿರೀಕ್ಷೆ ಮಾಡುವುದಿಲ್ಲ. ಅಭಿವೃದ್ಧಿಗೆ ಆದ್ಯತೆ ನೀಡುವ ವಿಶಿಷ್ಠ ಶಾಸಕರಾಗಿದ್ದಾರೆ. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರೂ ಅವರು ಎಂದಿಗೂ ಪ್ರಚಾರ ಮಾಡಿಲ್ಲ. ಅಭಿವೃದ್ಧಿ ಕೆಲಸಗಳಿಂದ ಜನರೇ ಪ್ರಚಾರ ಮಾಡುತ್ತಾರೆ ಎಂಬ ನಂಬಿಕೆ ಅವರದು. ಸಹಕಾರ ಕ್ಷೇತ್ರದಲ್ಲಿಯೂ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಚನ್ನಮ್ಮಳು ಆದರ್ಶ ಬದುಕು ಹೊಂದಿದ್ದಳು. ಅವಳಂತೆ ನಾವೆಲ್ಲರೂ ದೇಶಾಭಿಮಾನ ಹೊಂದಿದರೆ ದೇಶದ ಅಭಿವೃದ್ಧಿ ನಾಂದಿಯಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ ಮಾತನಾಡಿದರು.
ಇಂದು ನಾವು ಪರಿವರ್ತನೆಯ ಯುಗದಲ್ಲಿದ್ದೇವೆ. ಸಂವಿಧಾನದ ಮೂಲಕ ನಾವೆಲ್ಲರೂ ಜಾತ್ಯಾತೀತ ಬದುಕು ಸಾಗಿಸುತ್ತಿದ್ದೇವೆ. ಎಲ್ಲ ಸಮಾಜಗಳು ಅಭಿವೃದ್ಧಿಯಾಗಬೇಕು. ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗಾಗಿ ನಿರಂತರವಾಗಿ ಕೂಡಲಸಂಗಮಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದೆ. ಅವರ ಹೋರಾಟಕ್ಕೂ ನಾವು ಸಹಕಾರ ನೀಡುವ ಭರವಸೆ ನೀಡಿದ ಅವರು, ಸರ್ಕಾರಕ್ಕೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕುರಿತು ಗಮನಕ್ಕೆ ತಂದು ಸಮಾಜದ ಬೇಡಿಕೆಯನ್ನು ಪ್ರಾಮಾಣಿಕವಾಗಿ ಈಡೇರಿಸುವ ಭರವಸೆ ನೀಡಿದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಚನ್ನಬಸವ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಸಹಕಾರ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಅಖಿಲ ಭಾರತೀಯ ಪಂಚಮಸಾಲಿ ಸಮಾಜ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ, ಮುಖಂಡರಾದ ಸಂಗಮೇಶ ಓಲೇಕಾರ, ಅಪ್ಪುಗೌಡ ಪಾಟೀಲ ಮಾತನಾಡಿದರು.
ವೇದಿಕೆಯಲ್ಲಿ ಮುಖಂಡರಾದ ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ಶ್ರೀಕಾಂತ ಕೊಟ್ರಶೆಟ್ಟಿ, ಭೀಮನಗೌಡ ಪಾಟೀಲ, ಶರಣಪ್ಪ ಬಳ್ಳಾವೂರ, ರವಿ ರಾಠೋಡ, ರಾಮು ಕವಲಗಿ, ಶಿವಾನಂದ ನಡಕಟ್ಟಿ, ಬನ್ನೆಪ್ಪ ಡೋಣೂರ, ತಹಸೀಲ್ದಾರ ಯಮನಪ್ಪ ಸೋಮನಕಟ್ಟಿ ಇತರರು ಇದ್ದರು. ಬಿ.ಎಂ.ಮೂಕರ್ತಿಹಾಳ ಸ್ವಾಗತಿಸಿದರು. ಎಸ್.ಜಿ.ಮೊಕಾಶಿ, ಎಸ್.ಎಸ್.ಕತ್ತಿ ನಿರೂಪಿಸಿದರು.
ಸ್ವಾತಂತ್ರ್ಯದ ಸಂಕೇತ ಕಿತ್ತೂರು ಚನ್ನಮ್ಮ :ಬಸವಜಯಮೃತ್ಯುಂಜಯ ಶ್ರೀ
Related Posts
Add A Comment