ಸಿದ್ದರಾಮಯ್ಯ, ಜಮೀರ್ ಸೇವೆಗೆ ಅಜೀಜುಲ್ಲ ಅಜ್ಜು ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ : ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ರಾಜ್ಯ ವಕ್ಫ್ ಮಂಡಳಿ ಹಾಗೂ ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ಪಟ್ಟಣದ ಶಿವಾಜಿ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ತಾಲೂಕಿನ ಮಸೀದಿಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ಮೈಸೂರು ಜಿಲ್ಲಾ ಸಮಿತಿ ಅಧ್ಯಕ್ಷ ಅಜೀಜುಲ್ಲ ಅಜ್ಜು ಅವರು ಆಹಾರ ಕಿಟ್ ವಿತರಣೆ ಮಾಡಿ, ವಕ್ಫ್
ಅಲ್ಪ ಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಕ್ಫ್ ಮತ್ತು ಅಲ್ಪಸಂಖ್ಯಾತರ ಸಚಿವ ಜಮೀರ್ ಅಹಮದ್ ಖಾನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು .
ಮೈಸೂರು ಜಿಲ್ಲಾ ಸಮಿತಿ ಅಧ್ಯಕ್ಷ ಅಜೀಜುಲ್ಲ ಅಜ್ಜು ಮಾತನಾಡಿ, ವಕ್ಫ್ ಮಂಡಳಿವತಿಯಿಂದ ಈ ವರ್ಷದಿಂದ ಮಸೀದಿಗಳಿಗೆ ಆಹಾರದ ಕಿಟ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ರಂಜಾನ್ ಹಬ್ಬದಲ್ಲಿ ಮಸೀದಿಯಲ್ಲಿನ ಗುರುಗಳು ಹೆಚ್ಚಿನ ಕೆಲಸವನ್ನು ಮಾಡುತ್ತಾರೆ. ಅವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತಿದ್ದೇವೆ. ಅವರ ಆಶೀರ್ವಾದದಿಂದ ಮಂಡಳಿ ಅಭಿವೃದ್ಧಿಯಾದರೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಧರ್ಮದ ಬಡ ಜನರಿಗೆ ಮಂಡಳಿಯಿಂದ ಶೇ.30ರಷ್ಟು ಹಣ ಮೀಸಲಿಟ್ಟಿದ್ದೇವೆ. ಅತಿ ಕಡಿಮೆ ವಯಸ್ಸಿನಲ್ಲಿ ವಿಧವೆಯಾದವರಿಗೆ ಹೊಲಿಗೆ ಯಂತ್ರವನ್ನು ವಿತರಿಸಿದ್ದೇವೆ, ಬಡ ವಿದ್ಯಾರ್ಥಿಗಳ ಶುಲ್ಕ ಪಾವತಿಸುತ್ತಿದ್ದೇವೆ. ನಾನು ಅಧ್ಯಕ್ಷರಾದ ಬಳಿಕ ಮೈಸೂರು ಜಿಲ್ಲೆಯಾದ್ಯಂತ ಒಂದು ಸುತ್ತು ಪ್ರವಾಸ ಮಾಡಿ ಸ್ಥಿತಿಗತಿ ಅಧ್ಯಯನ ಮಾಡಿದ್ದೆ. ಈಗ ಎಲ್ಲಿ ನಮ್ಮ ಧರ್ಮದವರು, ಬಡವರಿದ್ದಾರೋ ಅವರಿಗೆ ಆರ್ಥಿಕ ನೆರವು ನೀಡುತ್ತಾ ಬರುತ್ತಿದ್ದೇವೆ ಎಂದರು. ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ ಕೊಟ್ಟಿದ್ದಾರೆ. ಬಜೆಟ್ ಬಳಿಕ ಮತ್ತೆ 5 ಕೋಟಿ ಕೊಡುವುದಾಗಿ ಸಚಿವ ಜಮೀರ್ ಖಾನ್ ಭರವಸೆ ನೀಡಿದ್ದಾರೆ. ಬರುವ ಅನುದಾನದಲ್ಲಿ ವಕ್ಫ್ ಮಂಡಳಿ ವ್ಯಾಪ್ತಿಗೆ ಸೇರುವ ಮಸೀದಿಗಳು ಮತ್ತು ಈದ್ಗಾ ಮೈದಾನಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುತ್ತೇವೆ ಎಂದು ಅಜೀಜುಲ್ಲ ಅಜ್ಜು ಹೇಳಿದರು.
ಯುವ ಮುಖಂಡ ಸಲೀಂ ಪಾಷಾ ಮಾತನಾಡಿ, ಅಜೀಜುಲ್ಲ ಅಜ್ಜು ಅವರು ಜಿಲ್ಲಾಧ್ಯಕ್ಷರಾದ ಬಳಿಕ ಬಡವರ ನೋವಿಗೆ ಸ್ಪಂದಿಸಿ ಅವರಿಗೆ ನೆರವು ನೀಡುತ್ತಾ ಬರುತ್ತಿದ್ದಾರೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಜೀಝುಲ್ಲಾ ಅಜ್ಜು, ಸದಸ್ಯರಾದ ನಿಸಾರ್ ಅಹ್ಮದ್ , ಹೆಚ್ ಡಿ ಕೋಟೆ ಜಾಮಿಯಾ ಮಸೀದಿ ಅಧ್ಯಕ್ಷ ನಜೀರ್ ಅಹ್ಮದ್, ಏಜಾಜ್ ಪಾಷಾ, ಶಫಿವುಲ್ಲಾ, ರಹಮದ್ ಅಲಿ, ದಸ್ತಗೀರ್, ಯುವ ಮುಖಂಡರಾದ ಸಲೀಂ ಪಾಷಾ. ನೇಮತ್, ರೆಹಾನ್. ರಿಯಾಜ್ ಬೇಗ್, ಜುನೈದ್ ಪಾಷಾ. ರಮ್ಯಾ, ಮಸೀದಿಯಾ ಇಮಾಮಗಳಾದ ಆಸಿಫ್ ಹಜರತ್, ಸಕ್ಲೇನ್, ನಜೀಬ್, ಅಮೀನ್ ಸೇರಿದಂತೆ ತಾಲೂಕಿನ ಮೌಸನ್ ಹಾಗೂ ಹಿಮಾಂಗಗಳು ಹಾಗೂ ಹೆಚ್ ಡಿ ಕೋಟೆಯ ಜಾಮಿಯಾ ಕಮಿಟಿಯ ಮತ್ತು ಲಗನ್ ಶಾವಲಿ ಕಮಿಟಿಯ ಸದಸ್ಯರು ಹಾಜರಿದ್ದರು.

