ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಿಲ್ಲೆಯಾದ್ಯಂತ ಮಾ.೨ ರಿಂದ ಮಾ. ೮ವರೆಗೆ ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಶೇಷ ದಂಡಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಆದೇಶ ಹೊರಡಿಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ ೦೧ ರಿಂದ ೧೮ರವರೆಗೆ ಮಹಾನಗರ ಪಾಲಿಕೆಯ ವಲಯ ಆಯುಕ್ತರಾದ ಹುಚ್ಚೇಶ ಚಿತ್ತರಗಿ ಅವರನ್ನು, ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ ೧೯ ರಿಂದ ೩೫ರವರೆಗೆ ಮಹಾನಗರ ಪಾಲಿಕೆಯ ವಲಯ ಆಯುಕ್ತರಾದ ಮೋಹನ ಜಾಧವ ಅವರನ್ನು ವಿಶೇಷ ದಂಡಾಧಿಕಾರಿಗಳಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಈ ಅವಧಿಯಲ್ಲಿ ಜಿಲ್ಲೆಯ ೧೩ ತಾಲೂಕಿನ ತಹಶೀಲ್ದಾರರು ಕೇಂದ್ರ ಸ್ಥಾನದಲ್ಲಿರುವಂತೆಯೂ ಹಾಗೂ
ಉಪ ವಿಭಾಗೀಯ ದಂಡಾಧಿಕಾರಿಗಳು, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.

