ತೋಂಟದ ಸಿದ್ದಲಿಂಗ ಶ್ರೀಗಳ ಕಾರ್ಯ ಸರ್ವರಿಗೂ ಆದರ್ಶ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ : ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಪುರಸ್ಕೃತರಾದ ಗದುಗಿನ ತೋಂಟದ ಲಿಂ, ಡಾ.ಸಿದ್ದಲಿಂಗ ಮಹಾಸ್ವಾಮಿಗಳವರ ಸಾಮಾಜಿಕ ಹಿತೋಪ್ತಿ ಸೇವಾ ಕಾಯಕಗಳು ಸದಾ ಸ್ಮರಣೀಯವಾಗಿ ಜನಮಾನಸದಲ್ಲಿ ಅಜರಾಮರಾಗಿ ಉಳಿದಿವೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು.
ಸ್ಥಳೀಯ ರಾವಬಹದ್ದೂರ ಡಾ.ಫ.ಗು.ಹಳಕಟ್ಟಿ ಪ್ರೌಢಶಾಲೆ ಹಾಗೂ ಮಂಜಪ್ಪ ಹಡೇ೯ಕರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ತೋಂಟದ ಡಾ ಸಿದ್ದಲಿಂಗ ಶ್ರೀಗಳವರ 77 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರುಣಾರಸಭರಿತ ಭಾವದ ಹೃದಯಮಯ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಸಾಮಾನ್ಯರ ಸ್ವಾಮಿಗಳಾಗಿ ಧಾಮಿ೯ಕ ರಂಗದೊಂದಿಗೆ ಗೈದಿರುವ ಸಮಾಜಮುಖಿ ಸೇವಾ ಮಜಲು ಅನನ್ಯವಾಗಿವೆ. ಕೋಮು ಸೌಹಾರ್ದತೆ ಪ್ರತೀಕವಾಗಿರುವ ಕನ್ನಡಾಂಬೆಯ ಅಪರೂಪದ ಜೀವ ಸಿದ್ದಲಿಂಗ ಶ್ರೀಗಳವರ ಜನ್ಯವೇ ವೈವಿಧ್ಯ.ಕಾಯಕವೇ ನೈವೇದ್ಯವಾಗಿದ್ದು ಸಮಾಜಕ್ಕೆ ಅಮೋಘ ಸಮಪಿ೯ತವಾಗಿದೆ ಎಂದು ಬಣ್ಣಿಸಿದರು.
ಗಿಡಮರಗಳೆಂದರೆ ಶ್ರೀಗಳವರಿಗೆ ಬಲು ಪ್ರೀತಿ.ಧರ್ಮ ಪ್ರಸಾರ ಕಾಯಕದೊಂದಿಗೆ ಪರಿಸರ ರಕ್ಷಣೆಯಲ್ಲಿ ಅಗಮ್ಯ ಆಸಕ್ತಿ, ಕಾಳಜಿ ಹೊಂದಿದ್ದರು. ಹೀಗಾಗಿ ಇಲ್ಲಿನ ಶಾಲಾ,ಕಾಲೇಜು ಕ್ಯಾಂಪಸ್ ವೈವಿಧ್ಯ ಸಸ್ಯ ಬನದ ಆಶ್ರಯದಲ್ಲಿ ಹಸಿರು ಎಲೆಗಳ ಸುಗಂಧ ರಂಗಿನಲ್ಲಿ ನಳಿಸುತ್ತಿವೆ. ಇವೆಲ್ಲವೂ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ಸಹಕಾರದಿಂದ ನಡೆಯುತ್ತಿದೆ ಎಂದರು.
ಶುದ್ಧ ಆಮ್ಲಜನಕದ ಪ್ರಮಾಣ ಎಸ್.ವಿ.ವಿ ಸಂಸ್ಥೆಯ ಶಾಲಾಂಗಳದಲ್ಲಿದೆ. ಸಿದ್ದಲಿಂಗ ಮಹಾಸ್ವಾಮಿಗಳು ನಡೆದುಕೊಂಡು ಬಂದ ರೀತಿ,ನೀತಿ,ಕಾಯಕ ತೃಣಗಳು ಸಾಮಾನ್ಯರನ್ನು ಮುಟ್ಟಿವೆ. ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆ ಮರೆಯಲಾಗದು. ಪೂಜ್ಯರ ಕಾಯಕ ಕಾವ್ಯ ಮೀಮಾಂಸೆಯಲ್ಲಿ ಮಿಂದಿವೆ ಎಂದು ಜಿ.ಎಂ.ಕೋಟ್ಯಾಳ ಹೇಳಿದರು.
ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಮಾತನಾಡಿ, ಸರಳ, ಸಹಜ ಮೊಗಭಾವದ ತೋಂಟದ ಸಿದ್ದಲಿಂಗ ಶ್ರೀಗಳವರ ಹಿತನುಡಿಗಳು ನಿರರ್ಗಳತೆಯಲ್ಲಿ ತೇಲಿವೆ. ಅವು ಜನತೆಯ ಮನದಲ್ಲಿ ಶಾಶ್ವತವಾಗಿ ನೆಲೆಸಿವೆ. ತೇಜಸ್ ಚಹರೆ ಸಕಲರ ಪ್ರೀತಿಗೆ ಪಾತ್ರವಾಗಿದೆ. ಜನಪದ ಆಡುಭಾಷೆ ಕೇಳುವುದೇ ಒಂದು ಸೌಭಾಗ್ಯ ಎಂದರು.
ರಾಜ್ಯ ಸರಕಾರಿ ನೌಕರರ ಸಂಘ ಆಲಮಟ್ಟಿ ಶಾಖೆ ಅಧ್ಯಕ್ಷ ಸದಾಶಿವ ದಳವಾಯಿ, ವಿಶ್ರಾಂತ ಮುಖ್ಯ ಶಿಕ್ಷಕ ಎಂ.ಎಸ್.ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಹಿರೇಮಠ , ಶಿಕ್ಷಣ ಸಂಯೋಜಕ ಯು.ವಾಯ್.ಬಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಬಿ.ಹುರಕಡ್ಲಿ, ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ, ಬಸಯ್ಯ ಶಿವಯೋಗಿಮಠ, ಮುಖ್ಯ ಶಿಕ್ಷಕಿ ಕವಿತಾ ಮರಡಿ, ಕಮಲಾಕ್ಷಿ ಹಿರೇಮಠ ವೇದಿಕೆಯಲ್ಲಿದ್ದರು.
ಸರೋಜಾ ಕಬ್ಬೂರ, ಮಂಜುಳಾ ಸಂಗಾಪೂರ, ಕಾಂತನಾ ಕುಂದರಗಿ, ಅನು ಪಟೇಲ, ವಿದ್ಯಾ ಹಿರೇಮಠ, ಪೂಜಾ ಮಹೇಂದ್ರಕರ, ರಾಮಕೃಷ್ಣ ಉದಂಡಿ, ಇಬ್ರಾಹಿಂ ಹುನಗುಂದ , ಬಾಬು ಕೂಡಗಿ, ಶೇಖು ರಾಠೋಡ ಇತರರಿದ್ದರು.

