8 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇರದ ಬಡಾವಣೆಗೆ ಶಾಸಕ ಯತ್ನಾಳರಿಂದ ಮೋಕ್ಷ
ವಿಜಯಪುರ: ವಿದ್ಯುತ್ ಸಂಪರ್ಕ ಇಲ್ಲದೆ, ಕತ್ತಲಲ್ಲೇ ಜೀವನ ಸಾಗಿಸುತ್ತಿರುವುದು ತಿಳಿದು, ಆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಅವರು ದೀಪಗಳ ಹಬ್ಬ ದೀಪಾವಳಿ ಸಂದರ್ಭದಲ್ಲಿ ಬೆಳಕು ಹರಡಿಸಿದ್ದಾರೆ.
ಹೌದು ಅಥಣಿ ರಸ್ತೆಯ ನಮೋ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಶ್ರಯ ಮನೆಗಳಿಂದ ಕೂದಲೆಳೆ ದೂರದಲ್ಲಿರುವ ಗೋಲ್ಡನ್ ಪಾರ್ಕಗೆ ಕಳೆದ 8 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಅಲ್ಲಿನ ನಿವಾಸಿಗಳು ಕತ್ತಲಲ್ಲೇ ಜೀವನ ಸಾಗಿಸುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ, ಮೊಬೈಲ್ ಚಾರ್ಜಿಂಗ್ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳಿಗೂ ತೊಂದರೆ ಆಗುತ್ತಿತ್ತು. ಇಲ್ಲಿ ನಿವೇಶನಗಳನ್ನು ಹೊಂದಿದ್ದ ಬಹುತೇಕರು ಮನೆ ನಿರ್ಮಿಸಿಕೊಳ್ಳಲು ಹಾಗೂ ಬೇರೆಯವರು ಇಲ್ಲಿ ನಿವೇಶನ ಖರೀದಿಗೆ ಹಿಂದೇಟು ಹಾಕುತ್ತಿದ್ದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಗಂಭೀರ ಸಮಸ್ಯೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಗಮನಕ್ಕೆ ಬಂದಿತ್ತು. ಆಗ ನೀಡಿದ ಭರವಸೆಯಂತೆ ಇಂದು ಶಾಸಕರ ಪುತ್ರರಾದ ರಾಮನಗೌಡ ಪಾಟೀಲ ಯತ್ನಾಳ ಅವರು ಬಟನ್ ಒತ್ತಿ ಚಾಲನೆ ನೀಡುವ ಮೂಲಕ ಅಲ್ಲಿನ ನಿವಾಸಿಗಳ ಜೀವನವನ್ನು ಕತ್ತಲೆಯಿಂದ ಬೆಳಕಿಗೆ ತರುವ ಮಹತ್ತರ ಕಾರ್ಯ ಮಾಡಿದ್ದಾರೆ. ಶಾಸಕರ ಕಾರ್ಯಕ್ಕೆ ಅಲ್ಲಿನ ನಿವಾಸಿಗಳು ಅಭಿನಂಧಿಸಿದ್ದಾರೆ.
ದೀಪ ಬೆಳಗಿಸಿ ಮಾತನಾಡಿದ ರಾಮನಗೌಡ ಪಾಟೀಲ ಯತ್ನಾಳ ಅವರು, 8 ವರ್ಷಗಳಿಂದ ಗೋಲ್ಡನ್ ಪಾರ್ಕ ನಿವಾಸಿಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಕಳೆದ ಚುನಾವಣೆಯಲ್ಲಿ ಈ ಗಂಭೀರ ವಿಷಯ ಗಮನಕ್ಕೆ ತಂದಿದ್ದರು. ಅದರಂತೆ ವೈಯಕ್ತಿಕವಾಗಿ ವೆಚ್ಚ ಬರಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ನಮ್ಮ ತಂದೆಯವರು ಸರ್ಕಾರ ಸಹಾಯ ಸವಲತ್ತುಗಳ ಜೊತೆಗೆ ಬಡವರಿಗೆ ವೈಯಕ್ತಿಕವಾಗಿ ಸಹಾಯ ಸಹಕಾರ ಮಾಡುತ್ತಾ ಬಂದಿದ್ದಾರೆ. ದೀಪಾವಳಿ ಸಂತೋಷ ಮತ್ತು ಸಡಗರದಿಂದ ಆಚರಿಸಲು 11 ಸಾವಿರ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು ಎಂದರು.
ಇದೇ ವೇಳೆ ರಾಮನಗೌಡ ಪಾಟೀಲ ಯತ್ನಾಳ ಅವರನ್ನು ಸನ್ಮಾನಿಸಲಾಯಿತು. ಲಕ್ಕಪ್ಪ ಮಾಲಗಾರ, ಶಿಕ್ಷಕ ಶ್ರೀಮಂತ ಶಿರಶ್ಯಾಡ, ಬಾಳು ಪೂಜಾರಿ, ಶಿವಪ್ಪ ಬೈರವಾಡಗಿ, ಲಕ್ಷ್ಮಣಗೌಡ ಬಿರಾದಾರ, ದಾದಾಸಾಹೇಬ ಬಾಗಾಯತ ಮತ್ತಿತರರು ಇದ್ದರು.