ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರೀ ರಾವುತರಾಯ ಮಲ್ಲಯ್ಯ ಜಾತ್ರಾ ಅಂಗವಾಗಿ ಜರುಗಿದ ಸಕ್ಕರೆ ಲೋಬಾನ ಹಾಗೂ ಅನ್ನ ಸಂತರ್ಪಣೆಯಲ್ಲಿ ಭಕ್ತರು ಪಾಲ್ಗೊಂಡು ಸಂತೃಪ್ತರಾದರು.
ಪಟ್ಟಣದ ಜಾತ್ರೆಯ ಅಂಗವಾಗಿ ಸಂಪ್ರದಾಯದಂತೆ ನಡೆದುಕೊಂಡು ಬಂದ “ಸಕ್ಕರೆ ಲೋಬಾನ” ಗ್ರಾಮ್ಯಭಾಷೆಯಲ್ಲಿನ ‘ಸಕ್ರಿಲಾಭಾನ’ ಕಾರ್ಯಕ್ರಮದಲ್ಲಿ ಸೋಮವಾರ ಸಾವಿರಾರು ಭಕ್ತರು ಪಾಲ್ಗೊಂಡರು. ಬೆಳಿಗ್ಗೆಯಿಂದ ಸಾರ್ವಜನಿಕರು ಸರದಿಯಲ್ಲಿ ನಿಂತು ಇರ್ವರು ದೇವರ ದರ್ಶನ ಪಡೆದರು. ಇನ್ನೂ ಈ ಬಾರಿ ಆಡಳಿತ ಮಂಡಳಿ ಶೀಘ್ರದರ್ಶನ ವ್ಯವಸ್ಥೆ ಕಲ್ಪಿಸಿದ್ದು ಅಗತ್ಯ ಭಕ್ತರಿಗೆ ಅನುಕೂಲವಾಯಿತು.
ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನ ಸಮಿತಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಅನುಕೂಲ ಹಾಗೂ ಸೌಲಭ್ಯಗಳನ್ನು ಕಲ್ಪಿಸಿದ್ದು ಭಕ್ತರು ಸರಳ ದರ್ಶನಕ್ಕೆ ಸಹಕಾರಿಯಾಯಿತು. ಇನ್ನೂ ಪಟ್ಟಣದ ವಿವಿಧ ಗೆಳೆಯರ ಬಳಗದ ತಂಡಗಳು ಹಾಗೂ ಸಂಘ ಸಂಸ್ಥೆಗಳು ಹಿಂದಿನಂತೆ ಉಪಹಾರ ಸಹಿತ ಅನ್ನ ಸಂತರ್ಪಣೆಯನ್ನು ಯಶಸ್ವಿಯಾಗಿ ಕೈಗೊಂಡು ಭಕ್ತರ ಮನ ತಣಿಸಿದವು.
ಸಾಂಪ್ರದಾಯಿಕ ವಗ್ಗೆöÊಗಳಿಗೆ ಪ್ರಸಾದ ವಿತರಣೆ ಸೇರಿದಂತೆ ಭಕ್ತರ ದೀರ್ಘದಂಡ ನಮಸ್ಕಾರ ಸಹಿತ ವಿವಿಧ ಹರಿಕೆಗಳು ದೇವಸ್ಥಾನದ ಆವರಣದಲ್ಲಿ ಸಾಮಾನ್ಯವಾಗಿದ್ದವು. ಜಾತ್ರೆ ಸಹಿತ ಜನದಟ್ಟಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿ ತನ್ನ ಕರ್ತವ್ಯ ನಿಭಾಯಿಸಿತು.
ಈ ಬಾರಿ ಮಳೆಯ ಅಭಾವ ಹಾಗೂ ಬರದ ಕಾರಣ ಜಾತ್ರೆಯಲ್ಲಿ ಕಳೆದ ವರ್ಷಕ್ಕಿಂತ ಜನದಟ್ಟಣೆ ಕಡಿಮೆಯಾದಂತೆ ತೋರಿತಾದರೂ, ದೇವಸ್ಥಾನ ಆಡಳಿತ ಮಂಡಳಿ ಕೈಗೊಂಡ ಬದಲಾವಣೆಗಳು ಹಾಗೂ ಪೊಲೀಸ್ ಇಲಾಖೆಯ ಕ್ರಮಗಳಿಂದಾಗಿ ಭಕ್ತರು ನಿರಾಳವಾಗಿ, ಶಾಂತರೀತಿಯಿಂದ ದರ್ಶನ ಭಾಗ್ಯ ಪಡೆದಂತೂ ಸತ್ಯ.

