ಭಾರತೀಯ ಜನತಾ ಪಕ್ಷದ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಪ್ರತಿಕ್ರಿಯೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಾಂದವರಿಗಾಗಿ ಮೀಸಲಿರಿಸಿದ ವಿಶೇಷಾನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಡೈವೆರ್ಟ್ ಮಾಡಿದಾಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಬ್ಬರಿಸಿ ಸರ್ಕಾರವನ್ನು ಏಕೆ ತರಾಟೆಗೆ ತೆಗೆದುಕೊಳ್ಳಲಿಲ್ಲ, ಆಗ ಮೌನವಾಗಿ ಈಗ ಪ್ರಧಾನಿ ಅವರ ಮೇಲೆ ವಿನಾಕಾರಣ ಶೋಭೆ ಬಾರದ ರೀತಿಯಲ್ಲಿ ಪದ ಪ್ರಯೋಗಿಸಿ ಟೀಕಿಸಿರುವುದು ಎಷ್ಟು ಸರಿ? ಎಂದು ಭಾರತೀಯ ಜನತಾ ಪಕ್ಷದ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಪ್ರಶ್ನಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ರಾಜಕಾರಣಿ, ಅವರ ಬಗ್ಗೆ ನಮಗೆ ಗೌರವವಿದೆ, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಖರ್ಗೆ ಅವರ ಮೇಲೆ ಅಷ್ಟೇ ಅಭಿಮಾನ, ಗೌರವ ಇರಿಸಿಕೊಂಡಿದ್ದಾರೆ. ಅಂತಹ ವ್ಯಕ್ತಿಯನ್ನು ಟೀಕಿಸಿರುವುದು ಸರಿಯಲ್ಲ. ಈ ಅಬ್ಬರದ ಮಾತು ದಲಿತ ಬಾಂಧವರಿಗೆ ಅನ್ಯಾಯವಾದಾಗ ಏಕೆ ಬರಲಿಲ್ಲ ಎಂಬುದು ನನ್ನ ಸಹಜ ಪ್ರಶ್ನೆ. ಅದೇ ತೆರನಾಗಿ ಮೀಸಲಾತಿ ಹೆಚ್ಚಳ ವಿಷಯವಾಗಿ ರಾಜ್ಯ ಸರ್ಕಾರ ಸಮರ್ಥವಾದ ಕಾನೂನಾತ್ಮಕ ಹೋರಾಟ ಕೈಗೊಳ್ಳಲು ವಿಫಲವಾಗಿ ಮೀಸಲಾತಿ ವಿಷಯ ಹಿನ್ನಡೆಯಾದ ಸಂದರ್ಭದಲ್ಲಿ ಸರ್ಕಾರದ ನಡೆಯನ್ನು ಏಕೆ ಈ ಖಾರವಾದ ಮಾತಿನಿಂದ ಪ್ರಶ್ನಿಸಲಿಲ್ಲ.
ಪರಿಶಿಷ್ಟ ಪಂಗಡ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಬಳಕೆಯಾಗಬೇಕಾದ ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆ ಉದ್ದೇಶಕ್ಕೆ ವಾಮ ಮಾರ್ಗಕ್ಕೆ ಬಳಕೆ ಮಾಡಿದಾಗಲೂ ನೀವು ಧ್ವನಿ ಎತ್ತಲಿಲ್ಲ. ಇಷ್ಟೆಲ್ಲ ಅನ್ಯಾಯವಾದರೂ ಸಹ ನೀವು ಗಟ್ಟಿಯಾದ ಧ್ವನಿ ಎತ್ತಲಿಲ್ಲ ಎಂಬ ಬೇಜಾರು ಪ್ರತಿಯೊಬ್ಬ ದಲಿತ ಬಾಂಧವರಲ್ಲಿದೆ ಎಂದು ಕಾರಜೋಳ ಹೇಳಿದ್ದಾರೆ.
ಇನ್ನೂ ದಲಿತ ಬಾಂಧವರ ಬಗ್ಗೆ ಕಾಂಗ್ರೆಸ್ ಮೊದಲಿನಿಂದಲೂ ನಿರ್ಲಕ್ಷ್ಯ ನೀತಿ ಅನುಸರಿಸುತ್ತಲೇ ಇದೆ, ದೇಶಕ್ಕೆ ಮಹೋನ್ನತ ಸಂವಿಧಾನ ನೀಡಿದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಮಾಧಿ ಸ್ಥಳಕ್ಕೆ ನವದೆಹಲಿಯಲ್ಲಿ ಜಾಗ ನೀಡಲಿಲ್ಲ, ಅವರ ವಿರುದ್ಧ ಚುನಾವಣೆಯಲ್ಲಿ ಅಭ್ಯರ್ಥಿ ನಿಲ್ಲಿಸಿ ಅವರು ಚುನಾವಣೆಯಲ್ಲಿ ಪರಾಜಯ ಅನುಭವಿಸುವಂತೆ ಮಾಡಿದ್ದು ಸಹ ಕಾಂಗ್ರೆಸ್, ಈ ವಿಷಯವಾಗಿಯೂ ಖರ್ಗೆ ಸಾಹೇಬರು ಒಂದು ದಿನವೂ ಮಾತನಾಡಿಲ್ಲ.
ಯಾರನ್ನೋ ಮೆಚ್ಚಿಸಲು ಉನ್ನತ ವ್ಯಕ್ತಿತ್ವದ ಪ್ರಧಾನಿ ಅವರ ಬಗ್ಗೆ ಅಗೌರವ ತೋರುವ ಮಾತು ಆಡಿರುವುದು ಎಷ್ಟು ಸರಿ? ಈ ಕಾಂಗ್ರೆಸ್ ಪಕ್ಷದವರು ನಿಮಗೆ ಮುಖ್ಯಮಂತ್ರಿ ಸಹ ಮಾಡಲಿಲ್ಲ, ಇನ್ನೂ ದೇಶದ ಪ್ರಧಾನಿ ಅವರನ್ನು ಟೀಕಿಸಿದರೆ ನಿಮ್ಮನ್ನು ಪ್ರಧಾನಿಯಾಗಿಸುತ್ತಾರೆ ಎಂಬುದು ನಿಮ್ಮ ಭ್ರಮೆ, ಕಾಂಗ್ರೆಸ್ ಯಾವತ್ತೂ ಅಧಿಕಾರಕ್ಕೆ ಬರುವುದಿಲ್ಲ, ನಿಮ್ಮ ಕನಸು ಯಾವತ್ತೂ ನನಸಾಗುವುದಿಲ್ಲ, ಹೀಗಾಗಿ ಈ ಭ್ರಮೆಲೋಕದಿಂದ ಹೊರಬನ್ನಿ, ಯಾರನ್ನೋ ಮೆಚ್ಚಿಸಲು ಪ್ರಧಾನಿ ಅವರ ವಿರುದ್ಧದ ಹೇಳಿಕೆ ನೀಡಬೇಡಿ ಎಂದು ಹೇಳಲು ಬಯಸುತ್ತೇನೆ ಎಂದು ಕಾರಜೋಳ ಹೇಳಿದ್ದಾರೆ.

