ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ | ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾರ್ವಜನಿಕರು ಕಳೆದುಕೊಂಡ ಅಥವಾ ಕಳ್ಳತನವಾದ ಮೊಬೈಲ್‌ಗಳನ್ನು ಪತ್ತೆಹಚ್ಚಲು ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ಒಟ್ಟು ೧.೦೭ ಕೋಟಿ ಮೌಲ್ಯದ ೫೩೭ ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ. ಪತ್ತೆಯಾದ ಮೊಬೈಲ್‌ಗಳನ್ನು ಸಂಬಂಧಪಟ್ಟ ಸಾರ್ವಜನಿಕರಿಗೆ ಮರಳಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಸಾರ್ವಜನಿಕರ ದೈನಂದಿನ ಜೀವನದಲ್ಲಿ ಅತ್ಯಂತ ಅಗತ್ಯ ಸಾಧನ, ಮೊಬೈಲ್ ಕಳೆದುಹೋದ ಅಥವಾ ಕಳ್ಳತನವಾದ ಕುರಿತು ಸಾರ್ವಜನಿಕರಿಂದ ಪ್ರತಿದಿನ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿವೆ. ಈ ದೂರುಗಳ ಆಧಾರದ ಮೇಲೆ ಪೊಲೀಸ್ ಇಲಾಖೆ ಸಿಇಐಆರ್ ಪೋರ್ಟಲ್ ಬಳಸಿಕೊಂಡು ಮೊಬೈಲ್‌ಗಳ ಪತ್ತೆಗೆ ಕ್ರಮ ಕೈಗೊಳ್ಳುತ್ತಿದೆ.
ಸೆಂಟ್ರಲ್ ಎಕ್ಯೂಪಮೆಂಟ್ ಐಡೆಂಟಿಟಿ ರಿಜಿಸ್ಟ್ರರ್ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ರೂಪಿಸಿರುವ ಡಿಜಿಟಲ್ ವ್ಯವಸ್ಥೆಯಾಗಿದ್ದು, ಮೊಬೈಲ್ ಫೋನ್ ಕಳೆದುಹೋದಾಗ ಅಥವಾ ಕಳ್ಳತನವಾದಾಗ ಅದರ ಐಎಂಇಐ ಸಂಖ್ಯೆಯ ಸಹಾಯದಿಂದ ಸಾಧನವನ್ನು ಪತ್ತೆಹಚ್ಚಲು, ಬ್ಲಾಕ್ ಮಾಡಲು ಹಾಗೂ ಮರಳಿ ಪಡೆಯಲು ಈ ವ್ಯವಸ್ಥೆ ನೆರವಾಗುತ್ತದೆ ಎಂದರು.
ಈ ಪೋರ್ಟಲ್ ಮೂಲಕ ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್‌ಗಳ ದುರುಪಯೋಗವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಮೊಬೈಲ್ ಕಳೆದುಕೊಂಡವರು ನೀಡುವ ದೂರುಗಳ ಆಧಾರದ ಮೇಲೆ ಪೊಲೀಸರು ಪತ್ತೆ ಕಾರ್ಯ ಕೈಗೊಳ್ಳುತ್ತಾರೆ.
ಡಿ.ವೈ.ಎಸ್.ಪಿ. ಗಳಾದ ನಾಗರಾಜ್, ಚಂದ್ರಕಾಂತ ನಂದರೆಡ್ಡಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಎಲ್ಲ 28 ಪೊಲೀಸ್ ಠಾಣೆಗಳಲ್ಲೂ ಕಾರ್ಯಾಚರಣೆ
ವಿಜಯಪುರ ಜಿಲ್ಲೆಯ ಎಲ್ಲ 28 ಪೊಲೀಸ್ ಠಾಣೆಗಳಲ್ಲಿ ಈ ಪೋರ್ಟಲ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಂದ ದಾಖಲಾಗುವ ಮೊಬೈಲ್ ಕಳೆದುಹೋದ ಹಾಗೂ ಕಳ್ಳತನವಾದ ಪ್ರಕರಣಗಳನ್ನು ಪರಿಶೀಲಿಸಿ, ನಿಯಮಿತವಾಗಿ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಈವರೆಗೆ ಒಟ್ಟು 537 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳ ಅಂದಾಜು ಮೌಲ್ಯ 1,07,40,000 ಆಗಿದೆ ಎಂದು ನಿಂಬರಗಿ ವಿವರಿಸಿದರು.
ಮೊಬೈಲ್ ಪತ್ತೆ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಸಿಇಐಆರ್ ಪೋರ್ಟಲ್‌ನ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮನವಿ ಮಾಡಿಕೊಂಡರು.

