ಕೃಷಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ಲಕ್ಷ ಎತ್ತಿನ ಬಂಡಿಗಳ ಸಮ್ಮುಖದಲ್ಲಿ ರಸ್ತೆತಡೆ | ನಂದಿ ಸೇನೆ ಪ್ರಮುಖ ಬಸವರಾಜ ಬಿರಾದಾರ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜೋಡೆತ್ತಿನ ಕೃಷಿಗೆ ಪ್ರಥಮಾದ್ಯತೆ ನೀಡುವುದು, ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ೧೧ ಸಾವಿರ ರೂ. ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಭಿಯಾನ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಮನ್ನಣೆ ಇನ್ನೂ ನೀಡಿಲ್ಲ. ಇನ್ನೂ ಸ್ಪಂದನೆ ಮಾಡದೇ ಹೋದರೆ ಒಂದು ಲಕ್ಷ ಎತ್ತಿನ ಬಂಡಿಗಳ ಸಮ್ಮುಖದಲ್ಲಿ ನವ್ಹೆಂಬರ್ ೫ ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರಸ್ತೆ ತಡೆ ನಡೆಸುವುದು ಸೂಕ್ತ ಎಂದು ನಂದಿ ಸೇನೆ ಪ್ರಮುಖ ಬಸವರಾಜ ಬಿರಾದಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ತಾಲೂಕಾ ಮಟ್ಟದಲ್ಲಿ ಬೃಹತ್ ಹೋರಾಟದ ಮೂಲಕ ಎತ್ತಿನ ಬಂಡಿಗಳ ಸಮ್ಮುಖದಲ್ಲಿ ರಸ್ತೆ ತಡೆ ನಡೆಸಲಾಗಿದೆ, ಆದರೆ ಇನ್ನೂ ಸರ್ಕಾರ ಎಚ್ಚೆತ್ತುಕೊಳ್ಳದೇ ಹೋದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದ್ದು, ನ.೫ ರಂದು ಒಂದು ಲಕ್ಷ ಎತ್ತಿನ ಬಂಡಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ಹೋರಾಟ ನಡೆಸುವುದು ನಿಶ್ಚಿತ ಎಂದರು.
ಸತತ 3 ವರ್ಷಗಳಿಂದ ಜೋಡೆತ್ತಿನ ಕೃಷಿಕರ ನಂದಿ ಸೇನೆಯ ಬೇಡಿಕೆಗೆ ಸರ್ಕಾರ ಯಾವುದೇ ರೀತಿಯ ಸ್ಪಂದನೆ ನೀಡದಿರುವ ಕಾರಣ ಬಾಗಲಕೋಟ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಹತ್ತಿರ ಹೆದ್ದಾರಿಯನ್ನು ಇದೇ ದಿ.೩೦ ರಿಂದ ರಿಂದ ನಿರಂತರವಾಗಿ ನೂರಾರು ಎತ್ತಿನ ಬಂಡಿಗಳಿಂದ ತಡೆಯಲಾಗುವುದು, ಇದಕ್ಕೂ ಸರ್ಕಾರ ಸ್ಪಂದಿಸದೇ ಹೋದರೆ ನ.೫ ರಂದು ಒಂದು ಲಕ್ಷ ಎತ್ತಿನ ಬಂಡಿಗಳಿಂದ ರಾಜ್ಯದ ಹೆದ್ದಾರಿಗಳನ್ನು ತಡೆಯುವುದು ನಿಶ್ಚಿತ ಎಂದರು.
ಕಳೆದ 20 ವರ್ಷಗಳಲ್ಲಿ ಶೇ.80 ರಷ್ಟು ಜೋಡೆತ್ತು ಕೃಷಿ ಪದ್ಧತಿ ನಾಶವಾಗಿರುವುದರಿಂದ ಮಣ್ಣಿನ ಫಲವತ್ತತೆ ಎಲ್ಲ ಬೆಳೆಗಳ ಕೃಷಿ ಸಂಸ್ಕೃತಿ ನಾಶವಾಗುತ್ತಿದೆ. ಈ ಸಂದರ್ಭದಲ್ಲಿ, ರೈತರ ನಿಜವಾದ ಆಸ್ತಿಯಾದ ಎತ್ತುಗಳ ಶಕ್ತಿಯಿಂದ ನಿರ್ಮಾಣವಾದ ಬಯಲು ಸೀಮೆಯ ಗ್ರಾಮಗಳು ಎತ್ತುಗಳ ಶಕ್ತಿಯಿಂದ ಮಾತ್ರ ಉಳಿಯಲು ಸಾಧ್ಯವೆಂದು ಅರಿವು ಮೂಡಿಸಿದ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕಾಗಿ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ ಪ್ರಾರಂಭಿಸಿ ರಾಜ್ಯಾದ್ಯಂತ ಎತ್ತಿನ ಕೃಷಿಯ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕಾಗಿ ರಾಜ್ಯದ ಶೇ.10 ಪ್ರತಿಶತ ಬಜೆಟ್ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. ೧೧ ಸಾವಿರ ರೂ ಪ್ರೋತ್ಸಾಹ ಧನ ನೀಡುವ ಯೋಜನೆ ರೂಪಿಸುವುದು, ನಂದಿ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಔಷಧಿಗಳು ಹಾಗೂ ಆಹಾರ ತಯಾರಿಸುವುದಕ್ಕೆ ಪ್ರೊತ್ಸಾಹ ನೀಡುವ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ವಿಶೇಷ ಅಧಿವೇಶನ ಕರೆಯಿರಿ
ನಂದಿ ಸೇನೆ ಬೇಡಿಕೆಯು ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಶ್ರೀಗಳು ತೋರಿದ ದಾರಿಯಾಗಿದೆ. ಇದಕ್ಕಿಂತಲೂ ಉತ್ತಮವಾದ ಪರ್ಯಾಯ ದಾರಿಯನ್ನು ಸರ್ಕಾರ ಜಗತ್ತಿನ ಯಾವುದಾದರೂ ಕೃಷಿ ವಿಶ್ವವಿದ್ಯಾಲಯದ ಮೂಲಕ ತಿಳಿಸಿದರೆ, ಹೆದ್ದಾರಿ ತಡೆಯನ್ನು ಆ ಕ್ಷಣದಿಂದ ಹಿಂಪಡೆಯಲಾಗುವುದು ಎಂದರು.
ಇಲ್ಲವಾದರೆ, ಮುಖ್ಯಮಂತ್ರಿಗಳು ಕೂಡಲೇ ವಿಶೇಷ ಅಧಿವೇಶನ ಕರೆದು ರಾಜ್ಯದ ಜೋಡೆತ್ತಿನ ಕೃಷಿಕರ ಬೇಡಿಕೆಯನ್ನು ಈಡೇರಿಸಿ ರಾಜ್ಯವನ್ನು ನಿಜವಾದ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು ಎಂದು ನಂದಿ ಸೇನೆಯ ಬಸವರಾಜ ಹೇಳಿದರು.

