ಮುದ್ದೇಬಿಹಾಳದಲ್ಲಿ ಬಿಜೆಪಿ ಮುಖಂಡರು ಹಾಗೂ ರೈತ ಸಂಘಟನೆಗಳ ಪದಾಧಿಕಾರಿಗಳಿಂದ ಎಪಿಎಂಸಿಯಲ್ಲಿ ಹಮಾಲಿ ಕೆಲಸ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹೨,೫೦೦ ಪರಿಹಾರ ಮೊತ್ತವನ್ನು ಖಂಡಿಸಿ ಬಿಜೆಪಿ ಮುಖಂಡರು ಹಾಗೂ ರೈತ ಸಂಘಟನೆಗಳ ಪದಾಧಿಕಾರಿಗಳು ವಿನೂತನ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಮುನ್ನಾಧಣಿ ನಾಡಗೌಡ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಹಮಾಲಿ ಕೆಲಸ ಮಾಡುವ ಮೂಲಕ ಸರ್ಕಾರದ ಪರಿಹಾರ ಘೋಷಣೆಯನ್ನು ಅಣಕಿಸಿದರು. ಹಮಾಲಿ ಕೆಲಸದಿಂದ ಗಳಿಸಿದ ಸುಮಾರು ₹೩,೦೦೦ ಕೂಲಿ ಹಣವನ್ನು ಉಡುಗೊರೆ ರೂಪದಲ್ಲಿ ಮುಖ್ಯಮಂತ್ರಿ ಅವರಿಗೆ ಕಳುಹಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮುನ್ನಾಧಣಿ ನಾಡಗೌಡ ಮಾತನಾಡಿ, ರೈತರಿಗೆ ಎಕರೆಗೆ ₹೨,೫೦೦ ಪರಿಹಾರ ನೀಡುವುದಾಗಿ ಘೋಷಿಸಿರುವುದು ರೈತರ ಸಂಕಷ್ಟವನ್ನು ಅಣಕಿಸಿದಂತಾಗಿದೆ. ಇಂದು ಕೃಷಿ ಕಾರ್ಮಿಕನ ದಿನಗೂಲಿಯೇ ಸುಮಾರು ₹೧,೦೦೦ ಇದೆ. ಇಂತಹ ಸಂದರ್ಭದಲ್ಲಿ ಎಕರೆಗೆ ₹೨,೫೦೦ ಪರಿಹಾರ ನೀಡುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಮ್ಮೆ ಹೊಲ ಉಳುಮೆ ಮಾಡಲು ಸುಮಾರು ₹೧,೫೦೦ ಖರ್ಚಾಗುತ್ತದೆ. ಬೆಳೆ ಬೆಳೆಯಲು ಕನಿಷ್ಠ ಮೂರು ಬಾರಿ ಉಳುಮೆ ಮಾಡಬೇಕಾಗುತ್ತದೆ. ಬೀಜ, ರಸಗೊಬ್ಬರ, ಔಷಧಿ, ಕೂಲಿ ಹಾಗೂ ಇತರೆ ಕೃಷಿ ವೆಚ್ಚಗಳು ಹೆಚ್ಚಾಗಿವೆ. ಆದರೆ ಬೆಳೆ ಹಾನಿಗೊಳಗಾದ ರೈತನಿಗೆ ನೀಡುತ್ತಿರುವ ಪರಿಹಾರ ಮಾತ್ರ ಅತ್ಯಲ್ಪವಾಗಿದೆ ಎಂದರು.
ಮುಂಗಾರು ಬೆಳೆ ಬಹುತೇಕ ಕೈಕೊಟ್ಟಿದ್ದು, ಹಿಂಗಾರು ಬೆಳೆಗೂ ಪ್ರತಿಕೂಲ ಪರಿಸ್ಥಿತಿ ಎದುರಾಗುವ ಆತಂಕ ರೈತರಲ್ಲಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಪರಿಣಾಮಕಾರಿಯಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.
ಬೆಳೆ ಹಾನಿಯ ಪ್ರಮಾಣವನ್ನು ವೈಜ್ಞಾನಿಕವಾಗಿ ಪರಿಗಣಿಸಿ, ಪರಿಹಾರದ ಮೊತ್ತವನ್ನು ಮರುಪರಿಶೀಲಿಸಿ ಹೆಚ್ಚಿನ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮೂರನೇ ಹಂತದ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪ್ರಮುಖರಾದ ಹರೀಶ ನಾಟೆಕಾರ್, ಸೋಮನಗೌಡ ಬಿರಾದಾರ, ಮಲ್ಲಣ್ಣ ತಂಗಡಗಿ, ಲಕ್ಷ್ಮಣ ಬಿಜ್ಜೂರ, ಶ್ರೀಶೈಲ ದೊಡಮನಿ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಶಂಕರಗೌಡ ಶಿವಣಗಿ, ಸಿದ್ದರಾಜ ಹೊಳಿ, ಸುಭಾಸ ಕಟ್ಟಿಮನಿ, ಶೇಖರ ಆಲೂರ, ರವೀಂದ್ರ ಬಿರಾದಾರ, ಸಂತೋಷ ಬಾದರಬಂಡಿ, ರಮೇಶ ಢವಳಗಿ ಸೇರಿದಂತೆ ರೈತ ಸಂಘಟನೆಗಳ ಹಾಗೂ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.

