ಅ.೨ರಂದು ಭೂ ಮಾಪಕರ, ಅ.೪ರಂದು ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಗಳು | ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪರೀಕ್ಷಾ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭೂ ಮಾಪಕರು ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಸುಸೂತ್ರವಾಗಿ, ಶಿಸ್ತುಬದ್ಧವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಅಗತ್ಯವಿರುವ ಎಲ್ಲ ಪರೀಕ್ಷಾ ಪೂರ್ವ ಸಿದ್ಧತೆಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ಟೋಬರ್ ೨ರಂದು ನಡೆಯಲಿರುವ ಭೂ ಮಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯು ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡು ಪತ್ರಿಕೆಗಳಲ್ಲಿ ನಡೆಯಲಿದ್ದು, ವಿಜಯಪುರ ನಗರದ ೧೮ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೬,೯೫೬ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಅಕ್ಟೋಬರ್ ೪ರಂದು ನಡೆಯಲಿರುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯು ವಿಜಯಪುರ ನಗರದ ೪೯, ಕವಲಗಿ ೨, ತಿಡಗುಂದಿ ೧ ಹಾಗೂ ಬಬಲೇಶ್ವರದ ೧ ಸೇರಿದಂತೆ ಒಟ್ಟು ೫೩ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ೨೦,೮೦೮ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಈ ಬಾರಿ ನಮ್ಮ ಜಿಲ್ಲೆಗೆ ಒಬ್ಬರು ಮಾಸ್ಟರ್ ಟ್ರೇನರ್ ನೇಮಕವಾಗಿದ್ದು, ಅವರು ಪರೀಕ್ಷಾ ಸಿದ್ಧತೆ ಬಗ್ಗೆ ಈಗಾಗಲೇ ತಿಳಿಸಿಕೊಟ್ಟಿದ್ದಾರೆ ಎಂದರು.
ಇದೇ ಮೊದಲ ಬಾರಿಗೆ ಹಿರಿಯ ಅಧಿಕಾರಿಗಳನ್ನು ಪ್ಲೈಯಿಂಗ್ ಸ್ಕ್ವಾಡ್ ಆಗಿ ನೇಮಕ ಮಾಡಲಾಗಿದೆ. ಪ್ರತಿ ಕೇಂದ್ರದಲ್ಲೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ತಮ್ಮ ಕೇಂದ್ರಕ್ಕೆ ಬಂದಿರುವ ಗೌಪ್ಯ ಸಾಮಗ್ರಿಗಳನ್ನು ಪರಿಶೀಲಿಸಬೇಕು. ಪರೀಕ್ಷೆ ಆರಂಭಕ್ಕೆ ಮುನ್ನವೇ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಯಾವುದೇ ಗೊಂದಲಗಳಾಗದಂತೆ ಸಂಪೂರ್ಣ ಜಾಗೃತೆಯಿಂದ ನೋಡಿಕೊಳ್ಳಬೇಕು. ತನ್ಮೂಲಕ ಪಾರದರ್ಶಕ ಪರೀಕ್ಷೆ ನಡೆಯುವ ನಿಟ್ಟಿನಲ್ಲಿ ನೀವೆಲ್ಲ ಎಚ್ಚರಿಕೆ ವಹಿಸಬೇಕು ಎಂದು ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಪರೀಕ್ಷಾ ವಿಶೇಷ ಕಾಯ್ದೆ ರೂಪಿಸಿದ್ದು ಇದೆ. ಪರೀಕ್ಷೆಗೆ ಸಂಬಂಧಿಸಿದಂತೆ ಯೋಜನಾ ಬದ್ದವಾಗಿ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಅವರು ಮಾತನಾಡಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎ. ಉಪ್ಪಾರ, ಖಜಾನೆ ಇಲಾಖೆಯ ಉಪ ನಿರ್ದೇಶಕರಾದ ಆನಂದ ಮುಚ್ಚಂಡಿ, ಡಿವೈಎಸ್ಪಿ ನಾಗರಾಜ, ಮಾಸ್ಟರ್ ತರಬೇತಿದಾರರಾದ ಎಲ್.ಜಿ ಕುಂಬಾರ, ಜಗದೀಶ ಗುಲಗಂಜಿ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಪರೀಕ್ಷೆ ಕೇಂದ್ರಗಳ ಉಪ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.

"ಈ ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಿಮ್ಮ ತಯಾರಿ ಬಹಳ ಮುಖ್ಯ. ಪರೀಕ್ಷಾರ್ಥಿಗಳಿಗೆ ಗೊಂದಲವಾಗದಂತೆ ನೋಡಿಕೊಳ್ಳಿ. ಈ ಪರೀಕ್ಷೆಗಳು ಪ್ರತಿಯೊಬ್ಬ ಅಭ್ಯರ್ಥಿಯ ಜೀವನದ ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಘಟ್ಟಗಳಾಗಿವೆ. ಹಾಗಾಗಿ ಯಾವುದೇ ಕಾರಣಕ್ಕೂ ಪರೀಕ್ಷಾ ಕರ್ತವ್ಯವನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಿಸಬೇಕು."– ಲಕ್ಷ್ಮಣ ನಿಂಬರಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

“ಪ್ಲೈಯಿಂಗ್ ಸ್ಕ್ವಾಡ್ ಆಗಿ ಹಿರಿಯ ಅಧಿಕಾರಿಗಳನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅವರಿಗೆ ನಾಲ್ಕು ಐದು ಕೇಂದ್ರ ಹಂಚಿಕೆ ಮಾಡಲಾಗಿದ್ದು, ಪರೀಕ್ಷೆ ಆರಂಭಕ್ಕೂ ಮೊದಲು ಅಲ್ಲಿರಬೇಕು. ಯಾವುದೇ ಗೊಂದಲಗಳಿದ್ದರೆ ತಕ್ಷಣಕ್ಕೆ ಗಮನಕ್ಕೆ ತರಬೇಕು. ಪರೀಕ್ಷಾ ಸೂಚನೆಗಳನ್ನು ಪಾಲಿಸಿ, ಚುನಾವಣಾ ರೀತಿಯಲ್ಲಿ ಜಿಲ್ಲಾಡಳಿತ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಲಾಗಿದೆ.”
– ಡಾ.ಔದ್ರಾಮ
ಅಪರ ಜಿಲ್ಲಾಧಿಕಾರಿ

