ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಂಘದ ಸದಸ್ಯರ ಸಹನೆ, ಸಹಕಾರ, ತಾಳ್ಮೆ, ಭಾತೃತ್ವ ಭಾವನೆಗಳಿಂದ ಸಂಘ ಪ್ರಗತಿ ಕಾಣಲು ಸಾಧ್ಯ ಎಂದು ಯಾಳವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಶನಿವಾರ ವಿ.ಪ್ರಾ.ಗ್ರಾ.ಕೃ.ಸ ಸಂಘದ ೫೦ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒಳ್ಳೆಯ ವ್ಯವಹಾರದ ಮೂಲಕ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ರೈತರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಇಡೇರಿಸುವ ಭರವಸೆ ನೀಡುತ್ತೇನೆ ಎಂದರು.
ಕಡಕೋಳ ಹಿರೇಮಠದ ಮಹಾಲಿಂಗಸ್ವಾಮೀಜಿ ಸಾನಿಧ್ಯ ವಹಿಸಿ, ದೀಪ ಬೆಳಗಿಸಿ ಮಾತನಾಡಿ, ರೈತರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸುವುದರ ಮೂಲಕ ಸಂಘ ಉತ್ತಮ ಕಾರ್ಯ ಮಾಡುತ್ತಿದೆ. ರೈತರು ಸಹ ತಮ್ಮ ನಿತ್ಯ ವ್ಯವಹಾರಗಳನ್ನು ಸರಿಯಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಯಾನಂದ ಗುರುಮಠ ವರದಿ ವಾಚಿಸಿದರು. ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಂತೋಷ ಬಿರಾದಾರ ಮಾತನಾಡಿ, ಬರಗಾಲ ಘೋಷಣೆ ಹಿನ್ನೆಲೆಯಲ್ಲಿ ರೈತರು ಸರ್ಕಾರ ಕೇಳಿರುವ ಅಗತ್ಯ ದಾಖಲಾತಿ ಸರಿಯಾಗಿ ನೀಡುವಂತೆ ತಿಳಿಸಿದರು.
ಸಂಘದ ಆಡಳಿತ ಮಂಡಳಿಯ ರಾವ್‌ಸಾಹೇಬಗೌಡ ನ್ಯಾಮಣ್ಣವರ, ಶಿವನಗೌಡ ಪಾಟೀಲ, ರವಿ ದೊಡಮನಿ, ಶಿವಾನಂದ ಮೂಲಿಮನಿ, ಸಂಗನಗೌಡ ತಳೇವಾಡ, ಯಲ್ಲಪ್ಪ ಬೂದಿಹಾಳ, ಧರೆಣ್ಣ ಉಪ್ಪಾರ, ಶಾಂತಮ್ಮ ದೊಡಮನಿ, ಮಾಣಿಕಮ್ಮ, ಸಂಗಣ್ಣ ನಾಯ್ಕೋಡಿ, ಸಹಿತ ಎಚ್.ಪಿ.ಕರಡಿ, ಡಿ.ಎಂ.ಖಾನಾಪೂರ, ನಿಂಗನಗೌಡ ಮೂಲಿಮನಿ ಸೇರಿದಂತೆ ಎಲ್ಲ ನಿರ್ದೇಶಕರು, ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

