ಬಾಬಾನಗರದಲ್ಲಿ ನಡೆದ ಪಾನಿಸಾಹೇಬ್ ದೇವರ ಜಾತ್ರಾ ಮಹೋತ್ಸವದಲ್ಲಿ ಸಚಿವ ಎಂ.ಬಿ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸೋಮವಾರ ಬಬಲೇಶ್ವರ ಮತಕ್ಷೇತ್ರದ ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ನಡೆದ ಪಾನಿಸಾಹೇಬ್ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಸರ್ವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದೂ–ಮುಸ್ಲಿಂ ಸಮುದಾಯದವರು ಸಹೋದರರಂತೆ ಒಂದಾಗಿ ಜಾತ್ರೆಯನ್ನು ಆಚರಿಸುತ್ತಾ, ಭಾವೈಕ್ಯತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುತ್ತಿರುವುದು ಸಂತಸ ತಂದಿದೆ. ಧರ್ಮ, ಜಾತಿ, ಭೇದಗಳನ್ನು ಮೀರಿ ಪರಸ್ಪರ ಪ್ರೀತಿ, ಗೌರವ ಹಾಗೂ ಸಹಬಾಳ್ವೆಯಿಂದ ಬದುಕುವ ಈ ಸುಂದರ ಪರಂಪರೆ ಎಲ್ಲೆಡೆ ಪಸರಿಸಲಿ, ಸಮಾಜದಲ್ಲಿ ಶಾಂತಿ–ಸೌಹಾರ್ದತೆ ಸದಾ ನೆಲೆಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮದ ನಾನಾ ಮುಖಂಡರು, ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

