ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಹಕಾರಿ ಸಂಘಗಳ ಪ್ರಗತಿಯಲ್ಲಿ ರೈತಾಪಿ ವರ್ಗದ ಸಹಕಾರ ಬಹಳ ಮಹತ್ವದ್ದಾಗಿದೆ ಎಂದು ಬಂಥನಾಳ ಸಂಗನಬಸವೇಶ್ವರ ಮಠದ ಸಂಗನಬಸವೇಶ್ವರ ಶ್ರೀ ಹೇಳಿದರು.
ಮುಳಸಾವಳಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆವರಣದಲ್ಲಿ ಶನಿವಾರ ನಡೆದ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿ ಆಶೀರ್ವಚನ ನೀಡಿದರು.
ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ, ಮಾತನಾಡಿ, ಗ್ರಾಮದ ರೈತರಿಗೆ ಡಿಸಿಸಿ ಬ್ಯಾಂಕ್ ಮೂಲಕ ದೊರೆಯುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವುದಾಗಿ ಹೇಳಿದರು. ಜೊತೆಗೆ ಸಂಘದ ಉಗ್ರಾಣ ನಿರ್ಮಾಣಕ್ಕಾಗಿ ಉಚಿತ ಕಡಿ ಒದಗಿಸುವ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಸಂಗನಗೌಡ ಬಿರಾದಾರ ಮಾತನಾಡಿ, ೨೦೨೫-೨೬ನೇ ಸಾಲಿನ ಲೆಕ್ಕಪತ್ರ ವರದಿ ವಾಚನ ಮಾಡಿ ಸಂಘ ೨೦ ಲಕ್ಷ ರೂ.ಗಳ ಆದಾಯ ಗಳಿಸಿರುವುದನ್ನು ಹೇಳಿದರು ಮತ್ತು ಪರಸ್ಪರ ಸಹಕಾರದ ಮೂಲಕ ರೈತರ ಏಳಿಗೆಗೆ ಶ್ರಮಿಸೋಣ ಎಂದರು.
ಲೆಕ್ಕ ಪರಿಶೋಧಕ ಕಮಲಾಕರ ಕದಂ ಹಾಗೂ ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಕವಿತಾ ಕಲಶೆಟ್ಟಿ ಮಾತನಾಡಿ, ರೈತರು ಯಾವುದೇ ಆಮಿಷಕ್ಕೊಳಗಾಗದೇ ಸ್ಥಳೀಯ ಕೃಷಿ ಸಹಕಾರ ಸಂಘದಲ್ಲಿ ಹೂಡಿಕೆ ಮಾಡಲು ತಿಳಿಸಿದರು. ನಂತರ ಕೃಷಿಯಲ್ಲಿ ವಿಶೇಷ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.
ಸಿದ್ಧಾರೂಢ ಮಠದ ದಯಾನಂದ ಸ್ವಾಮೀಜಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಸಿದ್ಧಾರ್ಥ ರೂಗಿ, ಸಂಘದ ಉಪಾಧ್ಯಕ್ಷ ಕಲ್ಲಪ್ಪ ತಳವಾರ, ನಿರ್ದೇಶಕರಾದ ಕಲ್ಲಪ್ಪ ಮೂಲಿಮನಿ, ಮಲಕಪ್ಪ ನಾಯ್ಕೋಡಿ, ಬಸವರಾಜ ಬಮ್ಮನಳ್ಳಿ, ಜಾವೀದ ಮಕಾನದಾರ, ಚನ್ನು ಹದರಿ, ಶ್ರೀಶೈಲ ಹದರಿ, ಮಡು ಕುಂಬಾರ, ಶಿವಾನಂದ ಬಿರಾದಾರ, ರಮೇಶ ರಾಠೋಡ, ಕಾರ್ಯ ನಿರ್ವಾಹಣಾಧಿಕಾರಿ ಭೀಮನಗೌಡ ಪಾಟೀಲ, ಹಣಮಂತ್ರಾಯ ಹಿರೂರ ಮಲ್ಲನಗೌಡ ಬಿರಾದಾರ, ಸೇರಿದಂತೆ ಸಂಘದ ಎಲ್ಲಾ ಸದಸ್ಯರು, ಸಿಬ್ಬಂದಿ ಇದ್ದರು.

