ಸುಪ್ರೀಂಕೋರ್ಟ್ನಲ್ಲಿ ಆಂಧ್ರ & ತೆಲಂಗಾಣ ನಮ್ಮ ನೀರಾವರಿ ಯೋಜನೆಗಳಿಗೆ ಸಲ್ಲಿಕೆ ಮಾಡಿರುವ ಅರ್ಜಿಗಳನ್ನು ಹಿಂಪಡೆಯಲಿ | ವಿಜಯಪುರದಲ್ಲಿ ನೀರಾವರಿ ಹೋರಾಟಗಾರ ಪಂಚಪ್ಪ ಕಲಬುರ್ಗಿ ಗುಡುಗು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸುಪ್ರೀಂಕೋರ್ಟ್ನಲ್ಲಿ ಆಂಧ್ರ ಹಾಗೂ ತೆಲಂಗಾಣ ರಾಜ್ಯದವರು ನಮ್ಮ ನೀರಾವರಿ ಯೋಜನೆಗಳಿಗೆ ಸಲ್ಲಿಕೆ ಮಾಡಿರುವ ಅರ್ಜಿಗಳನ್ನು ಹಿಂಪಡೆಯುವವರೆಗೂ ಅವರಿಗೆ ನೀರು ಹರಿಸುವ ಕಾರ್ಯ ಮಾಡಬಾರದು, ಒಂದು ವೇಳೆ ರಾಜ್ಯ ಸರ್ಕಾರ ಜನರ ಕಣ್ಣಿಗೆ ಮಣ್ಣೆರೆಚಿದರೆ ಅದು ರಾಜ್ಯದ ಜನರಿಗೆ ಮಾಡುವ ದೊಡ್ಡ ದ್ರೋಹ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಹಾಗೂ ನೀರಾವರಿ ಹೋರಾಟಗಾರ ಪಂಚಪ್ಪ ಕಲಬುರ್ಗಿ ಗುಡುಗಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಕುಡಿಯುವ ನೀರು ಎಂಬ ವಿಷಯ ಮುಂದಿಟ್ಟುಕೊಂಡು ರೈತರ ಹೊಲಗಳಿಗೆ ನೀರು ಹರಿಸುವ ಕಾರ್ಯ ಮಾಡುತ್ತಿಲ್ಲ, ಆದರೆ ಅದಕ್ಕೆ ವ್ಯತಿರಿಕ್ತವಾಗಿ ತೆಲಂಗಾಣಕ್ಕೆ ನೀರು ಹರಿಸಲು ಮುಂದಾಗಿದ್ದಾರೆ, ಒಂದು ವೇಳೆ ಈ ರಾಜ್ಯಗಳಿಗೆ ನೀರು ಹರಿಸಿದರೆ ಈ ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಮಾಡುವ ದೊಡ್ಡ ದ್ರೋಹ ಎಂದರು.
ಆಂಧ್ರ ಹಾಗೂ ತೆಲಂಗಾಣ ರಾಜ್ಯದವರು ನಮ್ಮ ನೀರಾವರಿ ಯೋಜನೆಗಳಿಗೆ ದೊಡ್ಡ ರೀತಿಯಲ್ಲಿ ಕೊಕ್ಕೆ ಹಾಕುತ್ತಾರೆ, ಅವರು ವಿಘ್ನ ಸಂತೋಷಿಗಳು, ಹೀಗಾಗಿ ಮೊದಲು ಅವರು ನಮ್ಮ ನೀರಾವರಿ ಯೋಜನೆಗಳಿಗೆ ಅವರು ಹಾಕಿರುವ ರಿಟ್ ಪಿಟಿಷನ್‌ಗಳನ್ನು ತೆರವುಗೊಳಿಸಿಕೊಳ್ಳುವಂತೆ ಹೇಳಿ, ನಿಮಗೆ ತಾಕತ್ತ ಇದ್ದರೆ ಈ ಕಾರ್ಯ ಮಾಡಿ ಎಂದರು.
ತಮಿಳುನಾಡು, ಆಂಧ್ರಪ್ರದೇಶ ಸ್ವಲ್ಪವೇ ಸ್ವಲ್ಪ ನೀರು ಬಳಕೆ ಮಾಡಿಕೊಂಡರೂ ಸಹ ಕಾನೂನಾತ್ಮಕ ಹೋರಾಟ ನಡೆಸುತ್ತವೆ, ಆದರೆ ನಮ್ಮ ಭೀಮೆಯ ೫೦ ಟಿಎಂಸಿ ನೀರನ್ನು ಬಳಕೆ ಮಾಡಿಕೊಂಡರೂ ಸಹ ನಮ್ಮ ರಾಜ್ಯ ಸರ್ಕಾರಗಳು ಮೌನ ವಹಿಸುತ್ತದೆ, ಇದು ಉತ್ತರ ಕರ್ನಾಟಕದ ಭಾಗದ ನಿರ್ಲಕ್ಷ್ಯತೆಯ ಪ್ರತೀಕವೇ ಎಂದು ಪ್ರಶ್ನಿಸಿದರು.
ಹೊಲಗಾಲುವೆಗಳಿಗೆ ನೀರು ಹರಿಸಿ
ಆಲಮಟ್ಟಿ ಆಣೆಕಟ್ಟಿನಲ್ಲಿ ಹಾಗೂ ನಾರಾಯಣಪೂರ ಜಲಾಶಯದಿಂದ ನೀರಿನ ಲಭ್ಯತೆ ಸಮರ್ಪಕವಾಗಿದೆ, ಹೀಗಾಗಿ ರೈತರ ಹೊಲಗಳಿಗೆ ನೀರು ಹರಿಸಿದರೆ ಮೇವು ಹಾಗೂ ತನ್ನ ಬದುಕಿಗೆ ಆಗುವ ಪದಾರ್ಥಗಳನ್ನಾದರೂ ಬೆಳೆದುಕೊಳ್ಳಬಹುದು ಎಂದರು.
ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯ ಆಧಾರಿತ ಎಲ್ಲ ನೀರಾವರಿ ಯೋಜನೆಗಳಿಗೂ ಸಹ ನೀರು ಹರಿಸುವ ಕೆಲಸ ಮಾಡಬೇಕು ಎಂದರು.

