ಅಪೌಷ್ಟಿಕತೆ ತಡೆಗಟ್ಟುವ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪೋಷಣ್ ಅಭಿಯಾನದ ಭಾಗವಾಗಿ ಪೌಷ್ಠಿಕಾಂಶದ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೋಷಣ್ ಮಾಸಾಚರಣೆ ನಡೆಸಲಾಗುತ್ತಿದ್ದು ತಾಲೂಕ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಸೋಮವಾರ ಉಮರಜ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಚಡಚಣ ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಾಹೇಬಗೌಡ ಜುಂಜರವಾಡ ಚಾಲನೆ ನೀಡಿದರು.
ಪೋಷಣ್ ಅಭಿಯಾನದಲ್ಲಿ ಮಕ್ಕಳು, ಹದಿಹರೆಯದ ಹೆಣ್ಣುಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆಯನ್ನು ತಡೆಗಟ್ಟಲು, ಜೊತೆಗೆ ಪೌಷ್ಟಿಕಾಂಶ ಆಹಾರದ ಮಹತ್ವದ ಕುರಿತು ಜಾಗೃತಿ ಮೂಡಿಸಿ ಅಗತ್ಯವಾದ ಪೌಷ್ಟಿಕಾಂಶವನ್ನು ಒದಗಿಸುವ ಮೂಲಕ ಅವರ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಆರೋಗ್ಯಕರ, ಸಶಕ್ತ ಸಮಾಜ ನಿರ್ಮಿಸುವದು ಈ ಅಭಿಯಾನದ ಮುಖ್ಯ ಉದ್ದೇಶ ಎಂದರು.
ವೈದ್ಯಾಧಿಕಾರಿ ಅಭಯ ಹುಂಡೇಕಾರ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಯಾವುದೇ ಕಾರಣಕ್ಕೂ ಅಪೌಷ್ಟಿಕತೆಯಿಂದ ಹಾಗೂ ರಕ್ತಹೀನತೆಯಿಂದ ಬಳಲದಂತೆ ಸದಾ ನಿಗಾ ವಹಿಸಬೇಕು. ಇಲ್ಲದಿದ್ದಲ್ಲಿ ಎರಡೂ ಜೀವಗಳು ಅನಾರೋಗ್ಯಕ್ಕೆ ತುತ್ತಾಗುವ ಅಪಾಯಗಳು ಹೆಚ್ಚಾಗಲಿವೆ ಎಂದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೂತನ ಬಿರಾದಾರ ಮಾತನಾಡಿ, ಪೌಷ್ಟಿಕಾಂಶವು ಆರೋಗ್ಯಕರ ಸಮುದಾಯದ ಅಡಿಪಾಯವಾಗಿದೆ. ಪ್ರತಿಯೊಬ್ಬರೂ ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಸೇವಿಸುವ ಕುರಿತು ಜಾಗೃತಿ ಹೊಂದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಎಸ್.ಎಲ್. ಮಾನೆ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಿವಾನಂದ ಇರಮಾನೆ, ತಾ.ಪಂ. ನಿರ್ದೇಶಕ ಎಸ್.ಆರ್. ಕೊಟ್ಟಲಗಿ, ಮುಖಂಡ ಶಿವಾನಂದ ಹಿರೆಣ್ಣಿ, ಕುರಿ ಹಾಗೂ ಯಳಮೇಲಿ ಸೇರಿದಂತೆ ಅಂಗನವಾಡಿ ಮೇಲ್ವಿಚಾರಕಿ ಸುರೇಖಾ ಅಚ್ಚಿಗಾಂವ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

