ಅಥಣಿಯಲ್ಲಿ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಸರ್ಕಾರದ ಯಾವುದೇ ಯೋಜನೆಯಾಗಲಿ ನೇರವಾಗಿ ಪ್ರಜೆಗಳಿಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು “ಪ್ರಜಾ ಸೇವೆ” ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರದಂದು ಪ್ರಜಾ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ದಂಡಾಧಿಕಾರಿ ಸಿದ್ರಾಯಿ ಬೋಸಗಿ ತಿಳಿಸಿದರು.
ತಹಸೀಲ್ದಾರ್ ಕಚೇರಿ ಆವರಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಯೋಜನೆಯ ಮೊದಲ ಕಾರ್ಯಕ್ರಮವು ದಿನಾಂಕ 12 ರಂದು ಖೋತ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದು, ಸಹಕಾರ ಸಚಿವರು ಹಾಗೂ ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು” ಎಂದು ಹೇಳಿದರು.
“ಪ್ರಜೆಗಳ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆ, ಅಹವಾಲು, ಬೇಡಿಕೆಗಳನ್ನು ಮುಕ್ತವಾಗಿ ಸಚಿವರ ಹಾಗೂ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳ ಮುಂದೆ ಇಡಲು ಅವಕಾಶವಿದೆ. ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ತಿಳಿಸಿದರು.
ಆದ್ದರಿಂದ ಅಥಣಿ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ದಂಡಾಧಿಕಾರಿ ಸಿದ್ರಾಯಿ ಬೋಸಗಿ ಮನವಿ ಮಾಡಿದರು.

