ವಿಜಯಪುರದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಮಂಜಮ್ಮ ಜೋಗತಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜೀವನದಲ್ಲಿ ಸಮಯಕ್ಕೆ ಗೌರವ ಕೊಡಬೇಕು ಆಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಮಂಜಮ್ಮ ಜೋಗತಿ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಯೋಜಿಸಿದ್ದ ತಾರುಣ್ಯ ಸಿಂಧು ಯುವತಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಯುವಕರು ತಂದೆ ತಾಯಿಗೆ ಗೌರವ ಕೊಡುವುದನ್ನು ಕಲಿಯಬೇಕು, ಅವರು ಕಷ್ಟ ಪಟ್ಟು ನಿಮ್ಮನ್ನು ಓದಿಸುತ್ತಾರೆ. ಅವರಿಗೆ ಮೋಸ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಇವತ್ತಿನ ಸಮಾಜದಲ್ಲಿ ಯಾರು ಯಾರನ್ನು ಗುರುತಿಸುವುದಿಲ್ಲ, ನಿಮ್ಮನ್ನು ನೀವೇ ಗುರುತಿಸಿಕೊಳ್ಳಬೇಕು, ಈ ಸಮಾಜದಲ್ಲಿ ಕಾಲು ಎಳೆಯುವವರೇ ಹೆಚ್ಚು, ಅದಕ್ಕೆ ನಾವು ಧೈರ್ಯವಾಗಿ ಮುನ್ನುಗ್ಗಬೇಕು, ಅವಾಗ ಮಾತ್ರ ಸಾಧಕರು ಆಗಲು ಸಾಧ್ಯ ಎಂದರು.
ವಿದ್ಯಾರ್ಥಿನಿಯರು ಮೊಬೈಲ್ ಬಳಕೆಯಿಂದ ದೂರವಿರಬೇಕು. ಮೊಬೈಲ್ ಅನ್ನು ಸದ್ಬಳಕೆ ಮಾಡಿಕೊಳ್ಳಬೇಕು ಹೊರತು ದುರುಪಯೋಗ ಮಾಡಿಕೊಳ್ಳಬಾರದು, ಮೊಬೈಲ್ ಬಳಕೆಯ ಸಮಯವನ್ನು ಪುಸ್ತಕವನ್ನು ಓದುವ ಕಡೆ ಗಮನ ಕಡೆ ಕೊಡಿ ಪುಸ್ತಕಗಳನ್ನು ಓದುವುದರಿಂದ ನಿಮ್ಮ ಜೀವನವು ತಲೆ ಎತ್ತುವ ಹಾಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಎಬಿವಿಪಿಯ ಪ್ರಾಂತ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಡಾಂಗೆ ಮಾತನಾಡಿ, ಯುವತಿ ಸಮ್ಮೇಳನದ ಮೂಲಕ ನಮ್ಮ ದೇಶದ ಸಾಧಕ ಮಹಿಳೆಯರ ಇತಿಹಾಸ, ಮತ್ತು ನಮ್ಮ ದೇಶದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಬೇಕಾಗುವ ವಾತಾವರಣವನ್ನು ಮೂಡಿಸುವ ಕಾರ್ಯವನ್ನು ಎಬಿವಿಪಿ ಮಾಡುತ್ತಿದೆ, ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿನಿಯರ ಸ್ವಯಂ ರಕ್ಷಣೆಗಾಗಿ ಮಿಷನ್ ಸಾಹಸಿ ಕಾರ್ಯಕ್ರಮ ಹೀಗೆ ಹಲವಾರು ಕಾರ್ಯಕ್ರಮಗಳನ್ನ ಆಯೋಜಿಸುತ್ತಾ ಬರುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಮಲಾ ಹಂದಿಗೋಳ, ಡಾ. ಸುಮಾ ಬೋಳರಡ್ಡಿ, ಐಶ್ವರ್ಯ ಅಸಂಗಿ, ಮಲ್ಲಮ್ಮ ಪಾಟೀಲ, ಸ್ನೇಹಾ ಚವ್ಹಾಣ ಉಪಸ್ಥಿತರಿದ್ದರು.

ಭವ್ಯ ಶೋಭಾಯಾತ್ರೆ
ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತದ ಮಾರ್ಗವಾಗಿ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ನೂರಾರು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಸಾಂಸ್ಕೃತಿಕ ಕಲಾ ತಂಡಗಳ ಜೊತೆಗೆ ಭವ್ಯ ಶೋಭಾಯಾತ್ರೆಯು ನಡೆಯಿತು. ಶೋಭಾಯಾತ್ರೆಗೆ ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯರಾದ ಸಚಿನ ಕುಳಗೇರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಅಮಿತಕುಮಾರ ಬಿರಾದಾರ, ಎಂ ಎಸ್ ಬಿರಾದಾರ, ಹರ್ಷಾ ನಾಯಕ, ಹಣಮಂತ ಹಳ್ಳೂರ, ಪ್ರಥಮೇಶ ವಾಗ್ಮೋಡಿ, ಮಂಜುನಾಥ ಹಳ್ಳಿ,ವಿನಾಯಕ ಹಿರೇಮಠ, ಸ್ನೇಹಾ ಹಿರೇಮಠ, ದಾನಮ್ಮ ಹೊಸಮನಿ ಉಪಸ್ಥಿತರಿದ್ದರು.

