ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜನಪದ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಪ್ರದಾಯಗಳು ನಮ್ಮ ನಾಡಿನ ಸಂಸ್ಕೃತಿಯ ಜೀವಂತ ಪ್ರತೀಕಗಳಾಗಿವೆ. ಆಧುನಿಕತೆಯ ಭರಾಟೆಯಲ್ಲಿ ಅವು ಮರೆಯಾಗದಂತೆ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಕುಂಟೋಜಿ ಗ್ರಾಮದ ಆರಾಧ್ಯ ದೈವ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕದ ವತಿಯಿಂದ ಜಾತ್ರಾ ಕಮೀಟಿಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ, ಕಾರ್ಯಕ್ರಮವನ್ನೂ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಜನಪದವೆಂದರೆ ಕೇವಲ ಹಾಡು, ನೃತ್ಯ ಅಥವಾ ಮನರಂಜನೆಯಲ್ಲ. ಗ್ರಾಮೀಣ ಜನರ ಬದುಕು, ನೋವು-ನಲಿವು, ದುಡಿಮೆ, ನಂಬಿಕೆ, ಆಚರಣೆ, ಜೀವನಾನುಭವ ಹಾಗೂ ಸಾಮಾಜಿಕ ಮೌಲ್ಯಗಳ ಸಮಗ್ರ ಅಭಿವ್ಯಕ್ತಿಯಾಗಿದೆ. ನಮ್ಮ ಪೂರ್ವಜರು ಅಕ್ಷರಜ್ಞಾನ ಕಡಿಮೆಯಿದ್ದ ಕಾಲದಲ್ಲಿಯೂ ತಮ್ಮ ಅನುಭವ, ಜ್ಞಾನ ಮತ್ತು ಬದುಕಿನ ಪಾಠಗಳನ್ನು ಜನಪದ ಗೀತೆ, ಕಥೆ, ಗಾದೆ, ಲಾವಣಿ, ತತ್ವಪದ, ಡೊಳ್ಳು, ಕೋಲಾಟ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರಿಸಿದ್ದಾರೆ. ಹೀಗಾಗಿ ಜನಪದ ಕಲೆ ನಮ್ಮ ಇತಿಹಾಸದ ಜೀವಂತ ದಾಖಲೆಗಳಾಗಿವೆ. ಇಂದಿನ ಯುವ ಪೀಳಿಗೆ ಆಧುನಿಕ ಸಂಸ್ಕೃತಿಯತ್ತ ಆಕರ್ಷಿತವಾಗುತ್ತಿರುವ ಸಂದರ್ಭದಲ್ಲಿ, ತಮ್ಮ ನೆಲದ ಭಾಷೆ, ಕಲೆ, ಸಂಪ್ರದಾಯ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಬೆಳೆಸಿಕೊಳ್ಳಬೇಕು. ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ, ಗೌರವ ಮತ್ತು ಸೂಕ್ತ ವೇದಿಕೆ ದೊರೆತಾಗ ಮಾತ್ರ ಜನಪದ ಪರಂಪರೆ ಉಳಿಯಲು ಸಾಧ್ಯ ಎಂದರು.
ಪರಿಷತ್ತಿನ ತಾಲೂಕು ಅಧ್ಯಕ್ಷ ಎ.ಆರ್.ಮುಲ್ಲಾ ಮಾತನಾಡಿ, ಜನಪದ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕಲಾವಿದರನ್ನು ಉಳಿಸಿದರೆ ಕಲೆ ಉಳಿಯುತ್ತದೆ. ಕಲೆ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ಆದ್ದರಿಂದ ಜನಪದ ಕಲಾವಿದರಿಗೆ ಗೌರವದ ಜೊತೆಗೆ ಬದುಕಿಗೆ ಅಗತ್ಯವಾದ ಪ್ರೋತ್ಸಾಹ ಮತ್ತು ಅವಕಾಶಗಳನ್ನು ಕಲ್ಪಿಸುವುದು ಸರ್ಕಾರ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಕಮೀಟಿಯ ಅಧ್ಯಕ್ಷ ಹುರುಲಿಂಗಪ್ಪ ಸುಲ್ಲಳ್ಳಿ ಮಾತನಾಡಿ, ಯಾವುದೇ ನಿರೀಕ್ಷೆಯಿಲ್ಲದೆ ತಲೆಮಾರುಗಳಿಂದ ತಮ್ಮ ಕಲೆ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಗ್ರಾಮೀಣ ಕಲಾವಿದರ ಬದುಕು ಮತ್ತು ಸಾಧನೆಯನ್ನು ಸಮಾಜ ಗುರುತಿಸಿ ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಜನಪದ ಕಲಾ ತಂಡಗಳಿಂದ ಜನಪದ ಗೀತೆ, ಲಾವಣಿ, ಡೊಳ್ಳು ಕುಣಿತ, ಕೋಲಾಟ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಲಾವಿದರ ಕಲಾ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಮಾಜಿ ಸೈನಿಕ ನಾಗಯ್ಯ ಮಠ, ಪ್ರಮುಖರಾದ ಆನಂದ ಗಸ್ತಿಗಾರ, ಬಸನಗೌಡ ಬಿರಾದಾರ, ರಾಮಣ್ಣ ಹುಲಗಣ್ಣಿ, ಮಲ್ಲಿಕಾರ್ಜುನ ನಾಟೆಕಾರ, ಎಸ್.ಎಚ್.ಮುದ್ನಾಳ, ಈರಪ್ಪ ಬಿರಾದಾರ, ಗುರುಪಾದಪ್ಪ ಹೆಬ್ಬಾಳ ಮತ್ತೀತರರು ವೇದಿಕೆಯ ಮೇಲಿದ್ದರು.
ಪರಿಷತ್ತಿನ ಜಂಟಿ ಕಾರ್ಯದರ್ಶಿ ಎಸ್.ಕೆ.ಘಾಟಿ ನಿರ್ವಹಿಸಿದರು. ಕಲಾವಿದ ಎಂ.ಪಿ.ವಾಳದವರ ವಂದಿಸಿದರು.

