ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತವೆಂದು ಘೋಷಿಸಲು ಆಗ್ರಹಿಸಿ ನಡೆದ ಧರಣಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಳೆಯ ಕೊರತೆ ಹಾಗೂ ಅಸಮರ್ಪಕ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಂಪೂರ್ಣ ಜಿಲ್ಲೆಯ ಬರಪೀಡಿತವೆಂದು ಘೋಷಿಣೆ ಮಾಡಿ ಪರಿಹಾರ ಕೊಡಬೇಕು ಎಂದು ಇಂಡಿಯ ರೈತ ಮುಖಂಡ ಹಾಗೂ ವಕೀಲ ದತ್ತಾತ್ರೇಯ ಡೋಣಿ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲೆಯ ಅಂಬೇಡ್ಕರ ವೃತ್ತದಲ್ಲಿ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಘೋಷಣೆ ಮಾಡುವಂತೆ ಆಗ್ರಹಿಸಿ ನಡೆದಿರುವ ಹೋರಾಟದಲ್ಲಿ ವೇದಿಕೆ ಉದ್ದೇಶಿಸಿ ಅವರು ಮಾತನಾಡಿದರು
ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ ಕೇವಲ ವಿಜಯಪುರ, ನಿಡಗುಂದಿ ಕೊಲ್ಹಾರ, ಪೂರ್ಣ ಬರ, ಬಸವನಬಾಗೇವಾಡಿ, ತಿಕೋಟಾ, ಬಬಲೇಶ್ವರ ತಾಲೂಕುಗಳನ್ನು ಮಧ್ಯಮ ಬರಪೀಡಿತ ತಾಲೂಕುಗಳೆಂದು ಘೋಷಿಸಿರುವ ಸರಕಾರ ಉಳಿದ 7 ತಾಲೂಕುಗಳಲ್ಲಿ ಬರ ಇದ್ದರೂ ಘೋಷಣೆ ಮಾಡದೆ ಇರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸಂಪೂರ್ಣ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಬಸವರಾಜ ಹಂಜಗಿ ಹಾಗೂ ಬಸವರಾಜ ರೆಡ್ಡಿ ಅವರು ಮಾತನಾಡುತ್ತ, ಬಹುತೇಕ ಭಾಗಗಳಲ್ಲಿ ರೈತರು ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿದ್ದು, ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗುವ ಆತಂಕ ಎದುರಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ಮುಖಂಡರಾದ ಮಹಾದೇವ ಬನಸೋಡೆ, ರಾಮನಗೌಡ ಪಾಟೀಲ, ಬಸವರಾಜ ರೆಡ್ಡಿ, ಮಳೆಪ್ಪ, ಈರಪ್ಪ ಕುಳೆಕುಮಟಗಿ, ಶಿವಾನಂದಯ್ಯ ಹಿರೇಮಠ, ವಸಂತ ಭೈರಮಾಡಿ, ಅಮರೇಶ ಭೈರಗೊಂಡ, ಅಭಿಶೇಖ ಕಾಂಬಳೆ, ಮಾಳು ಪೂಜಾರಿ, ಗೇನಪ್ಪ ಬಿರಾದಾರ, ಸಿದ್ದನಗೌಡ ಬಿರಾದಾರ, ಸೇರಿದಂತೆ ಇತರರು ಇದ್ದರು.

