ವಿಜಯಪುರ ಜಿಲ್ಲಾ 371 (ಜೆ) ಹೋರಾಟ ಸಮಿತಿಯಿಂದ ಮನವಿ ಸಲ್ಲಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರಕಾರದಿಂದ ವಿಜಯಪುರ ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ಹೈದ್ರಾಬಾದ್ ವಿಮೋಚನಾ ದಿನಾಚರಣೆ (ಕಲ್ಯಾಣ ಕರ್ನಾಟಕ ಉತ್ಸವ) ಆಚರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ವಿಜಯಪುರ ಜಿಲ್ಲಾ 371 (ಜೆ) ಹೋರಾಟ ಸಮಿತಿ ವತಿಯಿಂದ ಗುರುವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ 371 ಜೆ ಹೋರಾಟ ಸಮಿತಿಯ ವಿನೋದ ಖೇಡ ಮಾತನಾಡಿ, ಸೆಪ್ಟೆಂಬರ್ 17 ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ದಿನವಾಗಿದೆ. ನಿಜಾಮರ ಆಡಳಿತದಿಂದ ಮುಕ್ತಿ ಪಡೆದು, ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟಕ್ಕೆ ಸೇರಿದ ಐತಿಹಾಸಿಕ ದಿನವನ್ನು ನಾವು ‘ಹೈದರಾಬಾದ್ ವಿಮೋಚನಾ ದಿನ’ (ಪ್ರಸ್ತುತ ಕಲ್ಯಾಣ ಕರ್ನಾಟಕ ಉತ್ಸವ) ಎಂದು ಆಚರಿಸಿಕೊಂಡು ಬರುತ್ತಿದ್ದೇವೆ. ವಿಜಯಪುರ ಜಿಲ್ಲೆಯು ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಈ ಹೋರಾಟದ ಇತಿಹಾಸದೊಂದಿಗೆ ನಿಕಟ ನಂಟನ್ನು ಹೊಂದಿದೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದ ಸ್ವಾಮಿ ರಾಮಾನಂದ ತೀರ್ಥರು ಹೈದ್ರಾಬಾದ ವಿಮೋಚನೆಯ ಚಳುವಳಿಯ ನೇತೃತ್ವ ವಹಿಸಿ ಹೈದ್ರಾಬಾದ್ ಪ್ರಾಂತದ ವಿಮೋಚನೆಯ ಪಿತಾಮಹಾರೆನ್ನಿಸಿದ್ದಾರೆ ಅವರ ತವರು ಜಿಲ್ಲೆ ವಿಜಯಪುರದಲ್ಲಿ ಸರ್ಕಾರದಿಂದ ಹೈದ್ರಾಬಾದ್ ವಿಮೋಚನಾ ಚಳುವಳಿ ನಾಯಕರಿಗೆ ಗೌರವ ಸಲ್ಲಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅನೀಲ ಇಕ್ಕಡೆ, ನ್ಯಾಯವಾದಿ ಎನ್. ಸುರೇಶ ಕುಮಾರ ಮಾತನಾಡಿ, ಸ್ವಾಮಿ ರಾಮಾನಂದ ತೀರ್ಥರೊಂದಿಗೆ ಜಿಲ್ಲೆಯ ಸರ್ದಾರ ಡಾ|| ಬಸವರಾಜ ನಾಗೂರು, ಸಿದ್ದಗೊಂಡಪ್ಪಗೌಡ ಪಾಟೀಲ ಅವರು ಸೇರಿದಂತೆ ಈ ಭಾಗದ ಅನೇಕ ಸ್ವಾತಂತ್ರ‍್ಯ ಹೋರಾಟಗಾರರು ನಿಜಾಮರ ಹಾಗೂ ರಜಾಕಾರರ ದೌರ್ಜನ್ಯದ ವಿರುದ್ಧ ಧೀರೋದಾತ್ತವಾಗಿ ಹೋರಾಡಿ ಹೈದ್ರಾಬಾದ್ ಪ್ರಾಂತವನ್ನು ವಿಮೋಚನೆಗೊಳಿಸಿದ್ದಾರೆ. ಈ ಮಹಾನ್ ಚೇತನಗಳ ತ್ಯಾಗವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಜಯಪುರ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸಹ ಸರಕಾರದ ವತಿಯಿಂದಲೇ ಅಧಿಕೃತವಾಗಿ, ಸಕಲ ಸರಕಾರಿ ಗೌರವಗಳೊಂದಿಗೆ ರಾಷ್ಟ್ರ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವನ್ನು ಆಚರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ 371 ಜೆ ಹೋರಾಟ ಸಮಿತಿಯ ಲಾಯಪ್ಪ ಇಂಗಳೆ ಮಾತನಾಡಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ವಸಂತ ಭೈರಾಮಡಿ, ಅಂಬರೀಶ ಭೈರಗೊಂಡ, ಕಲ್ಲಪ್ಪ ಶಿವಶರಣ, ಚಂದ್ರಶೇಖರ ಹೊಸಮನಿ, ಮೇಲಗಿರಿ ಕಟ್ಟಿಮನಿ, ಬಸವಕುಮಾರ ಕಾಂಬಳೆ, ಅಶೋಕ ವಾಲಿಕಾರ, ಎಂ.ಎ.ಜಿದ್ದಿಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

