ರೈತ ಸಂಘದ ನೇತೃತ್ವದಲ್ಲಿ ತಾಳಿಕೋಟೆಯಲ್ಲಿ ನಡೆಯುತ್ತಿರುವ ಧರಣಿ | ಧರಣಿಗೆ ಶಾಸಕ ರಾಜುಗೌಡ ಬೆಂಬಲ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ತಾಳಿಕೋಟೆ, ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅವರು ಬುಧವಾರ ಬೆಂಬಲ ಸೂಚಿಸಿದರು.
ಧರಣಿಯ ಏಳನೇ ದಿನದಂದು ಸ್ಥಳಕ್ಕೆ ಆಗಮಿಸಿದ ಶಾಸಕ ರಾಜುಗೌಡ ಪಾಟೀಲ ಅವರು ರೈತರನ್ನು ಉದ್ದೇಶಿಸಿ ಮಾತನಾಡಿ, ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಸೆ.೨೧ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ತಾಳಿಕೋಟೆ, ದೇವರಹಿಪ್ಪರಗಿ ಹಾಗೂ ಮುದ್ದೇಬಿಹಾಳ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುವುದಾಗಿ ತಿಳಿಸಿದ ಅವರು, ಈ ಮೂರು ತಾಲೂಕುಗಳನ್ನು ಬರ ಘೋಷಣೆಯಿಂದ ಕೈಬಿಟ್ಟಿರುವುದು ರೈತರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
ಅಧಿವೇಶನದ ಸಂದರ್ಭದಲ್ಲಿ ಸದನದ ಬಾವಿಗಿಳಿದು ಹೋರಾಟ ನಡೆಸಿಯಾದರೂ ಸರ್ಕಾರದ ಮೇಲೆ ಒತ್ತಡ ತಂದು, ಉಳಿದ ತಾಲೂಕುಗಳನ್ನೂ ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಒತ್ತಾಯಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾ ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ವೀರೇಶ ಕಾರಗನೂರ, ಅಶೋಕ ಅಸ್ಕಿ, ರಾಜುಗೌಡ ಕೊಳೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ಬಸನಗೌಡ ಪಾಟೀಲ, ಮಹಾಂತಯ್ಯ ಹಿರೇಮಠ, ಮಂಜುನಾಥ ಬಡಿಗೇರ, ಬಸವರಾಜ ಹೇರೂರ, ಮಲ್ಲಿಕಾರ್ಜುನ ಬಿರಾದಾರ, ಚೆನ್ನವೀರ ಹಿರೇಮಠ, ಶರಣಗೌಡ ಅಂಗಡಗೇರಿ, ಅಶೋಕ ಉಪ್ಪಲದಿನ್ನಿ, ಶ್ರೀನಿವಾಸ ಗೊಟಗುಣಕಿ, ಮಡಿವಾಳಪ್ಪ ಕಲಬುರಗಿ, ಕಾಶಿಲಿಂಗ ಬೊಮ್ಮನಹಳ್ಳಿ, ನಾನಾಗೌಡ ಪಾಟೀಲ, ಶಂಕರಗೌಡಪ್ಪ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

