ಡಿಜೆಯಲ್ಲಿ ಕೋಮು ಪ್ರಚೋದಕ ಹಾಡು ಹಾಕಿದ್ರೆ ಜಪ್ತಿ | ಪಿಎಸ್‌ಐ ಅಂಗಡಿ ವಾರ್ನಿಂಗ್
ಉದಯರಶ್ಮಿ ದಿನಪತ್ರಿಕೆ
ಚಡಚಣ: ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಸಂಭ್ರಮದಿಂದ ಆಚರಿಸುವಂತೆ ಗಣೇಶೋತ್ಸವ ಸಮಿತಿಗಳ ಮುಖಂಡರಿಗೆ ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಅರವಿಂದ ಅಂಗಡಿ ಸೂಚಿಸಿದರು.
ಸೆ.14ರಿಂದ ನಡೆಯಲಿರುವ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಚಡಚಣ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಶಾಂತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಎಸ್‌ಐ ಅರವಿಂದ ಅಂಗಡಿ, ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯ ಚಡಚಣ ಪಟ್ಟಣ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಎಲ್ಲರೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದರು.
ಗಣೇಶ ಮೂರ್ತಿಗಳ ವಿಸರ್ಜನೆಯನ್ನು ರಾತ್ರಿ 10 ಗಂಟೆಯೊಳಗೆ ಪೂರ್ಣಗೊಳಿಸಬೇಕು. ಮಿತಿಮೀರಿದ ಧ್ವನಿಯಿಂದ ವಯೋವೃದ್ಧರು, ಮಕ್ಕಳು ಹಾಗೂ ಅಸ್ವಸ್ಥರು ತೊಂದರೆ ಅನುಭವಿಸುವಂತಾಗಬಾರದು. ಹಬ್ಬದ ಸಂಭ್ರಮದ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ರೀತಿಯಲ್ಲಿ ಧ್ವನಿವರ್ಧಕ ಬಳಸುವುದನ್ನು ನಿಯಂತ್ರಿಸಿ ಡಿಜೆಗಳಲ್ಲಿ ಇಂಪಾದ ಹಾಡುಗಳಿರಲಿ ಮತ್ತು ಡಿಜೆಗಳಲ್ಲಿ ಯಾವುದೇ ಕೋಮು ಪ್ರಚೋದಕ ಅಥವಾ ಅಶಾಂತಿಗೆ ಕಾರಣವಾಗುವ ಹಾಡುಗಳನ್ನು ಪ್ರಸಾರ ಮಾಡಬಾರದು. ನಿಯಮ ಉಲ್ಲಂಘಿಸಿದಲ್ಲಿ ಡಿಜೆ ಹಾಗೂ ಸೌಂಡ್ ಸಿಸ್ಟಮ್‌ಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
5, 7, 9 ಹಾಗೂ 11ನೇ ದಿನ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಮಿತಿಗಳು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ವಿಸರ್ಜನೆ ದಿನದಂದು ಆಯೋಜಕರು ಮುನ್ನೆಚ್ಚರಿಕೆ ವಹಿಸಿ, ಪೊಲೀಸ್ ಇಲಾಖೆ ಸೂಚಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಬಿಜೆಪಿ ಚಡಚಣ ಮಂಡಲ ಅಧ್ಯಕ್ಷ ಕಾಂತುಗೌಡ (ಚಂದ್ರಕಾಂತ) ಪಾಟೀಲ ಮಾತನಾಡಿ, ಈ ವರ್ಷವೂ ಯಾವುದೇ ಅನಾಹುತಕ್ಕೆ ಅವಕಾಶ ನೀಡದೆ ಶಾಂತಿಯುತವಾಗಿ ಹಬ್ಬ ಆಚರಿಸೋಣ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ ಮಾತನಾಡಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆ ಮತ್ತು ಆದೇಶದಂತೆ ಪಟ್ಟಣ ಪಂಚಾಯಿತಿ ವತಿಯಿಂದ ವಾರ್ಡ್ ನಂ.7ರಲ್ಲಿ 20x20x20 ಅಡಿ ವಿಸ್ತೀರ್ಣದ ಗಣೇಶ ವಿಸರ್ಜನಾ ಹೊಂಡ ನಿರ್ಮಿಸಲಾಗಿದೆ. ಪಟ್ಟಣದ ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ಇದೇ ಹೊಂಡದಲ್ಲಿ ವಿಸರ್ಜಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಕೆ. ತಾವಸೆ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಪಟ್ಟಣ ಪಂಚಾಯಿತಿ, ಕೆಪಿಟಿಸಿಎಲ್ ಹಾಗೂ ಪೊಲೀಸ್ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗಣೇಶೋತ್ಸವ ಸಮಿತಿಗಳಿಗೆ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಪ್ರತಿಷ್ಠಾಪನೆ ಹಾಗೂ ಕಾರ್ಯಕ್ರಮಗಳ ಸಂದರ್ಭದಲ್ಲಿ ಶಾಂತಿ ಕಾಪಾಡಲು ಸಮಿತಿಗಳ ಸಹಕಾರ ಅಗತ್ಯ ಎಂದರು.
ಯುವಕರು ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಆದ್ಯತೆ ನೀಡಿ, ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಮನವಿ ಮಾಡಿದ ಅವರು, ಗಣೇಶ ಮೂರ್ತಿ ವಿಸರ್ಜನೆಗಾಗಿ ಪಟ್ಟಣ ಪಂಚಾಯಿತಿ ವತಿಯಿಂದ ವಾಹನದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಿಳಿಸಿದರು.
ಗಣೇಶೋತ್ಸವ ಸಮಿತಿಗಳ ಮುಖಂಡರು ಪ್ರತಿವರ್ಷದಂತೆ ಈ ವರ್ಷವೂ ಶಾಂತಿ, ಸೌಹಾರ್ದತೆ ಹಾಗೂ ಸಂಭ್ರಮದಿಂದ ಗಣೇಶ ಹಬ್ಬ ಆಚರಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಚಡಚಣ ಪೊಲೀಸ್‌ಠಾಣಾಧಿಕಾರಿ ಅರವಿಂದ ಅಂಗಡಿ,ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಮುಖ್ಯಾಧಿಕಾರಿ ಬಿ.ಕೆ. ತಾವಸೆ, ಬಿಜೆಪಿ ಚಡಚಣ ಮಂಡಲ ಅಧ್ಯಕ್ಷ ಕಾಂತುಗೌಡ (ಚಂದ್ರಕಾಂತ) ಪಾಟೀಲ, ದೇವೆಂದ್ರಪ್ಪಗೌಡ ಪಾಟೀಲ, ಚಿದಾನಂದ ಕುಂಬಾರ ಸೇರಿದಂತೆ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗಣೇಶ ಮಿತ್ರ ಮಂಡಳಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

