ಸರ್ಕಾರ ಜನತೆಗೆ ಸ್ಪಷ್ಟ ಉತ್ತರ ನೀಡಲು ಯುವ ಮುಖಂಡ ಸಂತೋಷ ಬಗಲಿ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಉಳಿದ ತಾಲೂಕುಗಳನ್ನು ಯಾವ ಮಾನದಂಡದ ಮೇಲೆ ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿದ್ದೀರಿ? ಸರ್ಕಾರ ಜಿಲ್ಲೆಯ ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಯುವ ಮುಖಂಡ ಸಂತೋಷ ಬಗಲಿ ಆಗ್ರಹಿಸಿದ್ದಾರೆ.
ನಗರದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟ ಹೋರಾಟಕ್ಕೆ ಬೆಂಹಲ ಸೂಚಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಮಳೆಯ ಕೊರತೆ ಕೇವಲ ಮೂರು ತಾಲೂಕುಗಳಿಗೆ ಮಾತ್ರ ಸೀಮಿತವಾಗಿದೆಯೇ? ಉಳಿದ ತಾಲೂಕುಗಳಲ್ಲಿ ರೈತರ ಬೆಳೆಗಳು ಸಮೃದ್ಧವಾಗಿವೆಯೇ? ಅಲ್ಲಿನ ರೈತರಿಗೆ ನೀರಿನ ಸಮಸ್ಯೆ ಇಲ್ಲವೇ? ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲವೇ? ರೈತರು ಸಂಕಷ್ಟದಲ್ಲಿಲ್ಲವೇ? ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಬೇಕು ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.
ಕಚೇರಿಗಳಲ್ಲಿ ಕುಳಿತು ತಯಾರಿಸಿದ ವರದಿಗಳ ಆಧಾರದ ಮೇಲೆ ರೈತರ ಭವಿಷ್ಯ ನಿರ್ಧರಿಸುವುದನ್ನು ಸರ್ಕಾರ ನಿಲ್ಲಿಸಬೇಕು. ನೆಲದ ವಾಸ್ತವ ಪರಿಸ್ಥಿತಿ ಅರಿಯಲು ಸರ್ಕಾರದ ಸಚಿವರು ಮತ್ತು ಅಧಿಕಾರಿಗಳು ಸ್ವತಃ ವಿಜಯಪುರ ಜಿಲ್ಲೆಯ ಪ್ರತಿಯೊಂದು ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

