ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸರಕಾರ ರಾಜ್ಯದ ರೈತರ ಹಿತದೃಷ್ಟಿಯಿಂದ ಬರ ಘೋಷಣೆಯ ನಿಯಮಗಳನ್ನು ಮರುಪರಿಶೀಲಿಸಿ, ರಾಜ್ಯಕ್ಕೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರಾಜ್ಯವು ಹಿಂದೆಂದೂ ಕಂಡು-ಕೇಳರಿಯದ ರೀತಿಯಲ್ಲಿ ಭೀಕರ ಬರಗಾಲದ ಹೊಡೆತಕ್ಕೆ ಸಿಲುಕಿದೆ. ಕಂದಾಯ ಇಲಾಖೆಯ ಹೊಣೆಗಾರಿಕೆಯ ಜೊತೆಗೆ ಉಪಮುಖ್ಯಮಂತ್ರಿಯೂ ಆಗಿರುವ ಡಾ. ಜಿ. ಪರಮೇಶ್ವರ ಅವರು ಈಗಾಗಲೇ 101 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ್ದಾರೆ. ರಾಜ್ಯದ ಒಟ್ಟು 200 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ನಿರ್ಧರಿಸಲಾಗಿದ್ದು, ಹಂತ ಹಂತವಾಗಿ ಈ ಘೋಷಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಬರಪೀಡಿತವೆಂದು ಘೋಷಿಸಲಾಗಿರುವ ತಾಲ್ಲೂಕುಗಳನ್ನು ಹೊರತುಪಡಿಸಿ, ಉಳಿದ ೧೦ ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಬೇಕಾಗಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ; ರಾಜ್ಯ ಸರ್ಕಾರ ಅವರ ನೆರವಿಗೆ ಎಲ್ಲ ರೀತಿಯಲ್ಲೂ ಬದ್ಧವಾಗಿದೆ.
ಇಂಥ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ನಿಲ್ಲಬೇಕಾದ ಕೇಂದ್ರ ಸರಕಾರದ ಬರ ಘೋಷಣೆಯ ಕಠಿಣ ಮಾನದಂಡಗಳಿಂದಾಗಿ ರಾಜ್ಯದ ಅರ್ಹ ರೈತರಿಗೆ ಪರಿಹಾರ ವಿಳಂಬವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
2020ರಲ್ಲಿ ಜಾರಿಗೊಳಿಸಲಾದ ಬರ ಮಾರ್ಗಸೂಚಿಗಳನ್ವಯ ಮಳೆ ಕೊರತೆಯ ಜೊತೆಗೆ ಉಪಗ್ರಹ ಆಧಾರಿತ Vegetation Indices, ಮಣ್ಣಿನ ತೇವಾಂಶದ ಕೊರತೆ, ಬೆಳೆ ಹಾನಿಯ ಪ್ರಮಾಣ ಸೇರಿದಂತೆ ಹಲವು ತಾಂತ್ರಿಕ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪರಿಗಣಿಸಲಾಗುತ್ತಿದೆ. ಇದರಿಂದ ವಾಸ್ತವವಾಗಿ ಬರ ಎದುರಿಸುತ್ತಿರುವ ಹಲವು ಪ್ರದೇಶಗಳನ್ನು ಬರಪೀಡಿತವೆಂದು ಘೋಷಿಸಿ, ಸಕಾಲದಲ್ಲಿ ಪರಿಹಾರ ಒದಗಿಸಲು ರಾಜ್ಯಗಳಿಗೆ ತೊಂದರೆಯಾಗುತ್ತಿದೆ.
ನಿಯಮಗಳು ರೈತರ ಬದುಕನ್ನು ರಕ್ಷಿಸಲು ಇರಬೇಕು. ಅವರ ನೆರವಿಗೆ ಅಡ್ಡಿಯಾಗಬಾರದು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ, ಬರ ಘೋಷಣೆಯ ಕಠಿಣ ಮಾನದಂಡಗಳನ್ನು ಸಡಿಲಿಸುವುದು ಇಂದಿನ ಅಗತ್ಯ. ಅರ್ಹ ರೈತರಿಗೆ ಕೇಂದ್ರದ ಪರಿಹಾರ ಸಕಾಲದಲ್ಲಿ ತಲುಪುವಂತೆ ನಿಯಮಗಳನ್ನು ಪರಿಷ್ಕರಿಸಬೇಕು.
ರೈತನ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರಗಳ ಕರ್ತವ್ಯ ಮಾತ್ರವಲ್ಲ, ಮಾನವೀಯ ಹೊಣೆಗಾರಿಕೆಯೂ ಹೌದು. ಕರ್ನಾಟಕದ ರೈತರ ಹಿತದೃಷ್ಟಿಯಿಂದ ಬರ ಘೋಷಣೆಯ ನಿಯಮಗಳನ್ನು ಮರುಪರಿಶೀಲಿಸಿ, ರಾಜ್ಯಕ್ಕೆ ನ್ಯಾಯಯುತ ಪರಿಹಾರ ಒದಗಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

