ಬಂಗ್ಲೆ ಮಲ್ಲಿಕಾರ್ಜನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಚಡಚಣ ತಾಲೂಕು ಪತ್ರಕರ್ತರ ಸಂಘದಿಂದ ಮನವಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾಯಿತ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರ ವಿರುದ್ಧ ಯಾವುದೇ ಸೂಕ್ತ ದಾಖಲೆ ಹಾಗೂ ಸಾಕ್ಷ್ಯಾಧಾರಗಳಿಲ್ಲದೆ ಆರೋಪಗಳನ್ನು ಮಾಡುವುದು ಖಂಡನೀಯ. ಇಂತಹ ಆರೋಪಗಳು ವ್ಯಕ್ತಿಯ ಘನತೆಗೆ ಮಾತ್ರವಲ್ಲದೆ, ರಾಜ್ಯದ ಪ್ರತಿಷ್ಠಿತ ಪತ್ರಕರ್ತರ ಸಂಘಟನೆಯ ಗೌರವಕ್ಕೂ ಧಕ್ಕೆ ಉಂಟುಮಾಡುತ್ತವೆ ಎಂದು ಚಡಚಣ ತಾಲೂಕು ಕೆಯುಡಬ್ಲುಜೆ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೋಣಜಮಠ ಹೇಳಿದರು.
ಚಡಚಣ ತಹಶೀಲ್ದಾರ್ ಮೂಲಕ ವಿಜಯಪುರ ಜಿಲ್ಲಾಧಿಕಾರಿ,ಸಿಎಂ.ಡಿ ಕೆ ಶಿವಕುಮಾರ ಹಾಗೂ ಗೃಹ ಸಚಿವರಿಗೆ ಕರ್ನಾಟಕ ಕಾನಿಪ ಸಂಘ (ಚಡಚಣ) ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ತಹಶೀಲ್ದಾರರ ಪರವಾಗಿ ರವಿಕುಮಾರ ಎಸ್.ಚವ್ಹಾಣ ಅವರು ಮನವಿ ಸ್ವೀಕರಿಸಿದರು.
ವೈಯಕ್ತಿಕ ದ್ವೇಷ ಅಥವಾ ದುರುದ್ದೇಶದಿಂದ ಸುಳ್ಳು ಹಾಗೂ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಪತ್ರಕರ್ತರ ಸಂಘದ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನಗಳಿಗೆ ನಾವು ಅವಕಾಶ ನೀಡುವದಿಲ್ಲ. ಬಂಗ್ಲೆ ಮಲ್ಲಿಕಾರ್ಜುನ ಅವರು ನೀಡಿರುವ ದೂರಿನಲ್ಲಿನ ಆರೋಪಗಳ ಸತ್ಯಕ್ಕೆ ದೂರ,ಆಧಾರರಹಿತ ಹಾಗೂ ದುರುದ್ದೇಶ ಪೂರ್ವಕವಾಗಿದ್ದು, ದೂರಿನಲ್ಲಿನ ಆರೋಪಗಳ ಸತ್ಯಾಸತ್ಯತೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಆರೋಪಗಳು ಆಧಾರರಹಿತವೆಂದು ಸಾಬೀತಾದಲ್ಲಿ ಅವರ ವಿರುದ್ಧ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಎಲ್ಲ ಸದಸ್ಯರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಡಚಣ ಕಾನಿಪ ಸಂಘದ ಅಧ್ಯಕ್ಷ ರಮೇಶ ಬಿರಾದಾರ, ಪ್ರ.ಕಾರ್ಯದರ್ಶಿ ರಾಜಶೇಖರ ಡೋಣಜಮಠ, ಖಜಾಂಚಿ ವಿನಯ ಜೀರಂಕಲಗಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶಿವಾನಂದ ಶಿವಶರಣ, ಕಾರ್ಯದರ್ಶಿ ಪ್ರಶಾಂತ ಮುಂಡೆವಾಡಿ, ಸುಬ್ರಹ್ಮಣ್ಯ ಸಂಗಮ, ಶ್ರೀಕಾಂತ ಬಗಲಿ, ಫಾರುಕ ವಾಲಿಕಾರ, ಸಿದ್ದಯ್ಯ ಹಿರೇಮಠ, ರೋಹಿತ ಹಾವಿನಾಳ ಹಾಗೂ ಪತ್ರಕರ್ತರು ಇದ್ದರು.

