ಶಿವಾನಂದ ತಗಡೂರ ವಿರುದ್ಧದ ದೂರು ಖಂಡಿಸಿ ಸಂಘದ ನಿಡಗುಂದಿ ಘಟಕದಿಂದ ಮನವಿ
ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದ ಸಂಘಟನೆಯಿಂದ ನೀಡಿರುವ ದೂರನ್ನು ಪರಿಗಣಿಸಬಾರದು ಹಾಗೂ ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಬಂಗ್ಲೆ ಮಲ್ಲಿಕಾರ್ಜುನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಡಗುಂದಿ ಘಟಕದ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಸಂಘವು ಹಲವು ವರ್ಷಗಳಿಂದ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಚುನಾಯಿತ ಸಮಿತಿಯ ನೇತೃತ್ವದಲ್ಲಿ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ. ಲೆಕ್ಕಪತ್ರ ಮತ್ತು ವಹಿವಾಟುಗಳು ಪಾರದರ್ಶಕವಾಗಿದ್ದು, ನಿಯಮಿತವಾಗಿ ರಾಜ್ಯ ಸಮಿತಿ ಹಾಗೂ ವಾರ್ಷಿಕ ಸಾಮಾನ್ಯ ಸಭೆಗಳು ನಡೆಯುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂಘದ ಚುನಾಯಿತ ಅಧ್ಯಕ್ಷರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸಂಘದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಪದಾಧಿಕಾರಿಗಳು, ಈ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸಂಘದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಹೇರಕಲ್, ಪ್ರಧಾನ ಕಾರ್ಯದರ್ಶಿ ಮಹಮ್ಮದಅಲಿ ಮಕಾನದಾರ, ಉಪಾಧ್ಯಕ್ಷರಾದ ಮಹಬೂಬ್ ವಾಲಿಕಾರ್, ಶೇಖರ್ ಬಳ್ಳಾರಿ, ಖಾದರ್ ಪಟೇಲ್ ಬಿರಾದಾರ್, ಬೀರಪ್ಪ ಬೆನ್ನೂರ್, ಜಿ ಸಿ ಮುತ್ತಲದಿನ್ನಿ , ಮಲ್ಲಿಕಾರ್ಜುನಯ್ಯ ತೊರ್ಗಲಮಠ, ಬಸಲಿಂಗಯ್ಯ ಮಠಪತಿ, ಸೇರಿದಂತೆ ಅನೇಕರಿದ್ದರು.

