ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪ್ರತಿಯೊಂದು ಕಾರ್ಯಕ್ರಮಕ್ಕೂ ಮೊದಲು ಪೂಜೆ ಸಲ್ಲಿಸಿ ನೆನೆಯುವ ಗಣೇಶನ ಹಬ್ಬ ಬಂದಿದೆ. ಈ ಹಬ್ಬವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಿಸಲು ಗಣೇಶೋತ್ಸವ ಸಮಿತಿಗಳು ಸಹಕರಿಸಬೇಕು ಎಂದು ಸಿಪಿಐ ಮೊಹಮ್ಮದ ಫಸಿಯುದ್ಧೀನ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣಯಲ್ಲಿ ಗಣೇಶೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಮೊದಲನೇ ಹಂತದ ಶಾಂತಿಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶೋತ್ಸವವು ಎಲ್ಲರನ್ನೂ ಒಗ್ಗೂಡಿಸುವ ಹಬ್ಬವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ಆಚರಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
ಈ ವೇಳೆ ನೂತನವಾಗಿ ಅಧಿಕಾರ ವಹಿಸಿಕೊಂಡ ಪಿಎಸ್‌ಐ ವಿಜಕುಮಾರ ತಳವಾರ ಮಾತನಾಡಿ, ಗಣೇಶೋತ್ಸವ ಸಮಿತಿಗಳು ಮುಂಚಿತವಾಗಿ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಬೇಕು. ಮೆರವಣಿಗೆ ಸಂದರ್ಭದಲ್ಲಿ ನಿಗದಿತ ಮಾರ್ಗ ಹಾಗೂ ಸಮಯವನ್ನು ಪಾಲಿಸುವುದರ ಜೊತೆಗೆ, ಯಾವುದೇ ರೀತಿಯ ಗಲಾಟೆ ಅಥವಾ ಸಂಘರ್ಷಕ್ಕೆ ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಕಿವಿಗೊಡದೆ, ಅನುಮಾನಾಸ್ಪದ ಬೆಳವಣಿಗೆಗಳು ಕಂಡುಬಂದರೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು. ಕೆಲವು ಸಂದರ್ಭಗಳಲ್ಲಿ ಪೊಲೀಸರೇ ಬರಬೇಕು ಎಂದು ಕಾಯದೇ, ನಾಗರಿಕರು ಸಹ ಪೊಲೀಸರಂತೆ ಜವಾಬ್ದಾರಿಯಿಂದ ಕೆಲಸ ಮಾಡುವಂತೆ ತಿಳಿಸಿದರು.
ಹಿಂದೂ ಕಾರ್ಯಕರ್ತ ಬಸಯ್ಯ ನಂದಿಕೇಶ್ವರಮಠ, ಗಣೇಶೋತ್ಸವ ಮಹಾ ಮಂಡಳದ ಪ್ರಮುಖರಾದ ಸಿದ್ಧರಾಜ ಹೊಳಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸಂಜು ಬಾಗೇವಾಡಿ, ಉದಯಸಿಂಗ್ ರಾಯಚೂರ, ಬಾಬಾ ಗುಡ್ನಾಳ ಮಾತನಾಡಿದರು.
ಕೃಷ್ಣ ಬಿಳೇಭಾವಿ, ಪರಶುರಾಮ ನಾಲತವಾಡ, ಸದಾಶಿವ ಮಠ, ಸಂಗಣ್ಣ ನಾಲತವಾಡ, ಕಾಶಿನಾಥ ಬಿರಾದಾರ, ಸಂಗಣ್ಣ ಮೇಲಿನಮನಿ, ಆನಂದ ಬಿಜ್ಜೂರಮಠ, ಹುಸೇನ ಮುಲ್ಲಾ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.
ಕ್ರೈಂ ಪಿಎಸ್‌ಐ ರಂಗಪ್ಪ ಭಂಗಿ ನಿರ್ವಹಿಸಿದರು.

