ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಕರು ಕೇವಲ ಪಾಠ ಬೋಧಿಸುವ ವ್ಯಕ್ತಿಯಲ್ಲ. ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿಸುವ ಮಾರ್ಗದರ್ಶಿ, ಸಮಾಜದ ನಿರ್ಮಾತೃ ಹಾಗೂ ದೇಶದ ಭವಿಷ್ಯ ರೂಪಿಸುವ ಶಕ್ತಿಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಹೇಳಿದರು.
ಸಿಂದಗಿ ನಗರದ ಶ್ರೀ ಸಮರ್ಥ ವಿದ್ಯಾ ವಿಕಾಸ ವಿವಿಧೋದ್ದೇಶಗಳ ಸಂಸ್ಥೆಯ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರೇರಣಾ ಶಾಲಾ ಮಕ್ಕಳ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ಷರದ ಜ್ಞಾನವನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಶಿಸ್ತು, ಜವಾಬ್ದಾರಿ ಮತ್ತು ದೇಶಪ್ರೇಮದ ಬೀಜ ಬಿತ್ತುವ ಶಿಕ್ಷಕರ ಪಾತ್ರ ಅಮೂಲ್ಯ. ಶಿಕ್ಷಕ ಈ ದೇಶದ ರಕ್ಷಕ, ಅಕ್ಷರದ ಮಾಂತ್ರಿಕ ಎಂಬ ಮಾತು ಶಿಕ್ಷಕರ ಮಹತ್ವವನ್ನು ಸಾರುತ್ತದೆ. ಅವರ ಜ್ಞಾನ, ಶ್ರಮ ಮತ್ತು ತ್ಯಾಗದಿಂದಲೇ ಉತ್ತಮ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಈ ವೇಳೆ ನಿವೃತ್ತ ಶಿಕ್ಷಕ ಎಸ್.ಕೆ.ಗುಗ್ಗರಿ ಮಾತನಾಡಿ, ಶಿಕ್ಷಕರು ವೃತ್ತಿಯನ್ನು ಪ್ರೀತಿಸಿ, ಶ್ರದ್ಧೆ ಹಾಗೂ ನಿಷ್ಠೆಯಿಂದ ಸಮಾಜಕ್ಕೆ ಒಪ್ಪುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಇತ್ತಿಚೇಗೆ ನಿವೃತ್ತ ಹೊಂದಿದ ಎಸ್.ಕೆ.ಗುಗ್ಗರಿ, ಬಸವರಾಜ ಪಟ್ಟಣಶೆಟ್ಟಿ, ಈ.ಎಸ್.ಟಕ್ಕಳಕಿ, ದ್ರಾಕ್ಷಾಯಿಣಿ ಕೋಳಕುರ, ಎಸ್.ಬಿ.ಕೊಣ್ಣುರ ಹಾಗೂ ಶಾಲೆಯ ಸಂಗೀತ ಶಿಕ್ಷಕ ವಿನಾಯಕ ಕುಲಕರ್ಣಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಮುಖ್ಯಗುರುಮಾತೆ ಎಸ್.ಐ.ಅಸ್ಕಿ, ಎಂ.ಪಿ.ಬುಕ್ಕಾ, ಶಿಕ್ಷಕ ಸತೀಶ ಕುಲಕರ್ಣಿ, ರಾಜಶೇಖರ ಬಂಟನೂರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

