ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರೀಕ್ಷೇತ್ರ ಧರ್ಮಸ್ಥಳದ ದಾನ-ಧರ್ಮದ ಪರಂಪರೆ ಸಮಾಜಮುಖಿ ಸೇವೆಗೆ ಪ್ರೇರಣೆಯಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮೋಹನ್ ನಾಯ್ಕ್ ಹೇಳಿದರು.
ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಜರುಗಿದ ದೇವರಹಿಪ್ಪರಗಿ ಮತ್ತು ಜಾಲವಾದ ವ್ಯಾಪ್ತಿಯ ಒಕ್ಕೂಟಗಳ ಪದಾಧಿಕಾರಿಗಳ ಸಭೆಗೆ ದೀಪ ಬೆಳಗಿಸುವದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಜನರಲ್ಲಿ ಉಳಿತಾಯದ ಮನೋಭಾವ, ಆರ್ಥಿಕ ಶಿಸ್ತು, ಸ್ವಾವಲಂಬನೆ ಹಾಗೂ ಉದ್ಯಮಶೀಲತೆಯನ್ನು ಬೆಳೆಸಲಾಗುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಸಾವಿರಾರು ಕುಟುಂಬಗಳು ಸಂಘಟಿತರಾಗಿ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವ ಶಕ್ತಿ ಪಡೆದಿವೆ. “ದಾನವೆಂದರೆ ಕೇವಲ ಹಣ ನೀಡುವುದಲ್ಲ, ಒಬ್ಬ ವ್ಯಕ್ತಿ ಸ್ವಾವಲಂಬಿಯಾಗಿ ನಿಲ್ಲುವಂತೆ ಮಾಡುವುದು ಕೂಡ ಮಹಾದಾನ” ಎಂಬ ಆಶಯವನ್ನು ಧರ್ಮಸ್ಥಳದ ಸೇವಾ ಕಾರ್ಯಗಳು ಸಾಕಾರಗೊಳಿಸುತ್ತಿವೆ ಎಂದರು.
ಕಲಬುರಗಿ ಪ್ರಾದೇಶಿಕ ಕಛೇರಿಯ ಎಸ್‌ಎಚ್‌ಜಿ ಸೇವಾ ವಿಭಾಗದ ಯೋಜನಾಧಿಕಾರಿ ಸದಾಶಿವ ಕುಲಾಲ್ ಮಾತನಾಡಿ, ದೇವರಹಿಪ್ಪರಗಿ ಮತ್ತು ಜಾಲವಾದ ವ್ಯಾಪ್ತಿಯಲ್ಲಿ ೬೫೦ ಪ್ರಗತಿಬಂಧು ಸ್ವಸಹಾಯ ಸಂಘಗಳಿದ್ದು, ಒಟ್ಟು ೬೫೦೦ ಸದಸ್ಯರು ಇದ್ದಾರೆ. ಸಂಘಗಳ ಮೂಲಕ ಸುಮಾರು ಕೋಟಿಯಷ್ಟು ಉಳಿತಾಯ ಸಂಗ್ರಹವಾಗಿದೆ ವಿಮಾ ಹಾಗೂ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳ ಮೂಲಕವೂ ಸದಸ್ಯರಿಗೆ ಮಹತ್ವದ ನೆರವು ದೊರೆತಿದೆ. ಸುರಕ್ಷಾ ಯೋಜನೆಯಡಿ ೧೫ ಲಕ್ಷ ರೂ. ಆರೋಗ್ಯ ರಕ್ಷಾ ಯೋಜನೆಯಡಿ ೧೪ ಲಕ್ಷ ರೂ. ಹಾಗೂ ಪ್ರಗತಿ ರಕ್ಷಾ ಕವಚದಡಿ ೧ ಕೋಟಿ. ರೂ. ಗೂ ಹೆಚ್ಚು ಪ್ರಯೋಜನ ಸದಸ್ಯರಿಗೆ ದೊರೆತಿದೆ. ಸ್ವಸಹಾಯ ಸಂಘಗಳ ಮೂಲಕ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂಬುದನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರಿಗೆ ತೋರಿಸಿಕೊಟ್ಟಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಅಡಿಟ್ ಪ್ರಬಂಧಕ ಶ್ರೀಕಾಂತ್, ತಾಲ್ಲೂಕು ವಿಚಕ್ಷಣಾಧಿಕಾರಿ ಗಣರಾಜ್, ಮೇಲ್ವಿಚಾರಕ ಶರಣು, ಮೇಲ್ವಿಚಾರಕಿ ಸವಿತಾ, ನೀಲಮ್ಮ ಬಿರಾದಾರ ಸೇರಿದಂತೆ ಎರಡು ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಹಾಗೂ ಸಿಎಸ್‌ಸಿ ಕಾರ್ಯಕರ್ತರು, ಒಕ್ಕೂಟದ ಪದಾಧಿಕಾರಿಗಳು ಇದ್ದರು.

