ವಿಜಯಪುರದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಎಂ.ರಾಮಪ್ಪ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಜೊತೆಗೆ ಭೋವಿ ಸಮಾಜಕ್ಕೆ ವೇಳೆ ವಿವಿಧ ಯೋಜನೆಗಳನ್ನು ನೀಡುವುದರ ಮೂಲಕ ಸರ್ಕಾರ ಸಮಾಜದ ಅಭ್ಯುದಯಕ್ಕೆ ಮುಂದಾಗಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಎಂ.ರಾಮಪ್ಪ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಬರುವ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಿಗಮದಿಂದ ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ, ನೇರ ಸಾಲ, ಮಹಿಳಾ ಸಬಲೀಕರಣ, ಹೈನುಗಾರಿಕೆ ಮತ್ತು ಭೂ ಒಡೆತನದಂತಹ ಯೋಜನೆಗಳನ್ನು ನೀಡುವುದರೊಂದಿಗೆ ಬೋವಿ ಸಮಾಜವನ್ನು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿಯತ್ತ ಕೊಂಡೊಯ್ಯಲು ಸರ್ಕಾರ ಮುಂದಾಗಿದೆ ಎಂದರು.
ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವಸತಿ ಸೌಲಭ್ಯ ನೀಡುತ್ತಿದ್ದೇವೆ. ಈ ಸೌಲತ್ತುಗಳಿಂದಾಗಿ ಮಕ್ಕಳು ಶಿಕ್ಷಣ ನೀಡಿದರೆ, ಸಮಾಜದ ಬಡತನ ನಿರ್ಮೂಲನೆಯಾಗುತ್ತಿದೆ. ತನ್ಮೂಲಕ ಭೋವಿ ಸಮಾಜದ ಕಷ್ಟಗಳು ಹಾಗೂ ಅವರ ಬಡತನ ನಿರ್ಮೂಲನೆಗೆ ಸರ್ಕಾರ ಮುಂದಾಗಿದೆ ಎಂದರು. ಉದ್ಯಮಿಗಳಾಗಲು, ಶಿಕ್ಷಣ ಸಂಸ್ಥೆ ಸ್ಥಾಪಿಸಲು ಸಮಾಜಕ್ಕೆ ಸರ್ಕಾರ ಅನುಕೂಲ ಕಲ್ಪಿಸಿದೆ ಎಂದರು.
ಪ್ರತಿ ವರ್ಷ ಆಯ-ವ್ಯಯ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಡಿ ಸರ್ಕಾರದಿಂದ ಅನುದಾನವನ್ನು ನಿಗದಿಪಡಿಸಲಾಗುತ್ತಿದೆ. ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ವಿಜಯಪುರ ಜಿಲ್ಲೆಯಲ್ಲಿ ೨೦೨೧-೨೨ ,೨೦೨೨-೨೩, ೨೦೨೩-೨೪,೨೦೨೪-೨೫ ಮತ್ತು ೨೦೨೫-೨೬ನೇ ಸಾಲಿನಲ್ಲಿ ಈವರೆಗೆ ೪೧೩ ಫಲಾನುಭವಿಗಳಿಗೆ ೪೮೦ ಲಕ್ಷ ರೂ. ಗಳನ್ನು ವಿತರಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಉದ್ಯಮಶೀಲತಾ ಯೋಜನೆಯು ಬ್ಯಾಂಕಿನ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ೧ ಲಕ್ಷ ಸಹಾಯ ಧನವಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ೨೦೨೩-೨೪, ೨೦೨೪-೨೫ ಮತ್ತು ೨೦೨೫-೨೬ ನೇ ಸಾಲಿನಲ್ಲಿ ಈವರೆಗೆ ೦೪ ಫಲಾನುಭವಿಗಳಿಗೆ ೪ ಲಕ್ಷ ರೂ. ಅನುಷ್ಠಾನಗೊಳಿಸಲಾಗಿದೆ ಎಂದರು.
ಸ್ವಾವಲಂಬಿ ಸಾರಥಿ ಯೋಜನೆಯಡಿ ೪ ಲಕ್ಷ ಘಟಕ ವೆಚ್ಚದ ಯೋಜನೆಯಡಿ ವಿಜಯಪುರ ಜಿಲ್ಲೆಯಲ್ಲಿ ೨೦೨೩-೨೪, ೨೦೨೪-೨೫ ಮತ್ತು ೨೦೨೫-೨೬ನೇ ಸಾಲಿನಲ್ಲಿ ಈವರೆಗೆ ೧೯ ಫಲಾನುಭವಿಗಳಿಗೆ ೭೬ ಲಕ್ಷ ರೂ. ಗಳನ್ನು ವಿತರಿಸಲಾಗಿದ್ದು, ಬ್ಯಾಂಕಿನ ಸಹಯೋಗದಡಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ ೨೦೨೧-೨೨, ೨೦೨೨-೨೩, ೨೦೨೩-೨೪,೨೦೨೪-೨೫ ಮತ್ತು ೨೦೨೫-೨೬ ನೇ ಸಾಲಿನಲ್ಲಿ ಈವರೆಗೆ ೧೨ ಫಲಾನುಭವಿಗಳಿಗೆ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, ಇದಕ್ಕಾಗಿ ೬೪ ಲಕ್ಷ ರೂ. ಗಳನ್ನು ಗುತ್ತಿಗೆದಾರರ ಕಂಪನಿಯವರಿಗೆ ಪಾವತಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

