ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ತಾಳಿಕೋಟೆ, ದೇವರಹಿಪ್ಪರಗಿ ಹಾಗೂ ಮುದ್ದೇಬಿಹಾಳ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಳಿಕೋಟೆ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದಲ್ಲಿ ನಡೆಸಲಾಗುತ್ತಿರುವ ಧರಣಿ ಸತ್ಯಾಗ್ರಹವು ರವಿವಾರ ೫ನೇ ದಿನಕ್ಕೆ ಕಾಲಿಟ್ಟಿದೆ.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ತಾಳಿಕೋಟೆ ಪಟ್ಟಣದಲ್ಲಿ ನಡೆದ ಧರಣಿಯ ನಾಲ್ಕನೇ ದಿನವೂ ಕ್ಷೇತ್ರದ ಶಾಸಕರು ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಅರವಿಂದ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಸಂಕಷ್ಟದ ಸಂದರ್ಭದಲ್ಲಿ ಸ್ಪಂದಿಸುವವರೇ ನಿಜವಾದ ಜನಪ್ರತಿನಿಧಿಗಳು. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಯಾವುದೇ ಅಭ್ಯರ್ಥಿಗೆ ಮುಂದಿನ ಚುನಾವಣೆಯಲ್ಲಿ ರೈತರು ಮತ ಹಾಕಬಾರದು ಎಂದು ಅರವಿಂದ ಕುಲಕರ್ಣಿ ಮನವಿ ಮಾಡಿದರು. ಜಿಲ್ಲೆಯ ಯಾವುದೇ ಶಾಸಕರು ಸರ್ಕಾರದ ಮೇಲೆ ಒತ್ತಡ ತರುವುದಾಗಲಿ, ರೈತರಿಗಾಗಿ ರಾಜೀನಾಮೆ ನೀಡುವ ಎಚ್ಚರಿಕೆ ನೀಡುವುದಾಗಲಿ ಮಾಡುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ ಮುಂಬರುವ ಚುನಾವಣೆಯಲ್ಲಿ ಗ್ರಾಮ-ಗ್ರಾಮಕ್ಕೆ ತೆರಳಿ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಬಹಿರಂಗಪಡಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಅಹೋರಾತ್ರಿ ಧರಣಿ ಎಚ್ಚರಿಕೆ
ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಮುಂದುವರಿಸಿದರೆ ಹಗಲು ಮಾತ್ರ ನಡೆಯುತ್ತಿರುವ ಧರಣಿಯನ್ನು ಸೋಮವಾರರಿಂದ ಅಹೋರಾತ್ರಿ ಧರಣಿಯಾಗಿ ಪರಿವರ್ತಿಸುವುದರ ಜೊತೆಗೆ ಹೋರಾಟ ನಡೆಸಲಾಗುವದು ಇದಕ್ಕೂ ತಪ್ಪಿದಲ್ಲಿ ಅಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ತಾಲೂಕು ಅಧ್ಯಕ್ಷರಾದ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಮಡಿವಾಳಪ್ಪ ಕಲಬುರ್ಗಿ, ಶ್ರೀನಿವಾಸ ಕೋಟಗುಣಕಿ, ರಾಮನಗೌಡ ಬಿರಾದಾರ, ಮಲ್ಲನಗೌಡ ಟಕ್ಕಳಕಿ, ಹನಮಂತರಾಯ ಮುದನೂರ, ಬಸವರಾಜ ಏವೂರ, ಪ್ರಭು ಆಲಗೂರ್, ಮಲ್ಲನಗೌಡ ಬಿರಾದಾರ, ನಾನಾಗೌಡ ಮುದನೂರ, ಬಸವರಾಜ ಶಿರೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

