ದಿ. ಎಚ್.ಟಿ.ಕುಲಕರ್ಣಿ ಗುರುಗಳ ಗುರುಸ್ಮರಣೆ ಕಾರ್ಯಕ್ರಮದ ನಿಮಿತ್ಯ ರಕ್ತದಾನ ಶಿಬಿರ | ಶಾಸಕ ಅಶೋಕ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅಕ್ಷರ ಕಲಿಸಿ ಬದುಕಿನ ದಾರಿ ತೋರಿಸಿದ ಶಿಕ್ಷಕ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಮಾರ್ಗದರ್ಶಕ, ಶಿಷ್ಯರ ಹೃದಯದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿರುವ ಎಚ್.ಟಿ.ಕುಲಕರ್ಣಿ ಗುರುಗಳ ಸ್ಮರಣೆ ನಿಜಕ್ಕೂ ಅಕ್ಷರಗಳಿಗಿಂತ ಮಿಗಿಲಾದ ಬದುಕಿನ ಪಾಠವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ಮಾಂಗಲ್ಯ ಭವನದಲ್ಲಿ ಪ್ರಾತಃಸ್ಮರಣೀಯ ಎಚ್.ಟಿ.ಕುಲಕರ್ಣಿ ಗುರುಗಳ ಗುರುಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕ ಎಂದರೆ ಕೇವಲ ಪಾಠ ಮಾಡುವ ವ್ಯಕ್ತಿಯಲ್ಲಿ. ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿಸುವ ದಾರಿದೀಪ. ಈ ಅರ್ಥವನ್ನು ಸೇವಯ ಮೂಲಕ ಸಾರ್ಥಕಗೊಳಿಸಿದವರು ಎಚ್.ಟಿ.ಕುಲಕರ್ಣಿ ಗುರುಗಳು. ಅವರ ಬಳಿ ವಿದ್ಯೆ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡುತ್ತಿದ್ದು, ತಮ್ಮ ಬದುಕಿನ ಯಶಸ್ವಿನ ಹಿಂದೆ ಗುರುವಿನ ಮಾರ್ಗದರ್ಶನವೇ ಪ್ರಮುಖ ಶಕ್ತಿ ಎಂದರು.
ಇಂತಹ ಗುರುಗಳ ಹೆಸರು ಸಿಂದಗಿ ನಗರದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುವ ದಿಸೆಯಲ್ಲಿ ಅವರ ಎಲ್ಲ ೫೪ ಬ್ಯಾಚನ್ ಶಿಷ್ಯ ಬಳಗದ ಸಲಹೆ ಸೂಚನೆಗಳನ್ನು ಪಡೆದುಕೊಂಡು ಶಿಷ್ಯ ಬಳಗ ನೀಡದ ಮನವಿಯಂತೆ ಸ್ಮಾರಕ ಭವನ ಹಾಗೂ ರಸ್ತೆಗೆ ಅವರ ಹೆಸರು ನಾಮಕರಣ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಮಾಜಿ ಶಾಸಕ ಅಶೋಕ ಶಾಬಾದಿ, ಮಾಜಿ ವಿಪ ಸದ್ಯಸ ಅರುಣ ಶಹಾಪುರ ಮಾತನಾಡಿ, ಬೋಧನೆಯಲ್ಲಿ ಕೇವಲ ಪಠ್ಯಪುಸ್ತಕದ ಜ್ಞಾನವಿರಲಿಲ್ಲ. ಶಿಸ್ತು, ಸಂಸ್ಕಾರ, ಪ್ರಾಮಾಣಿಕತೆ, ಮಾನವೀಯತೆ ಮತ್ತು ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕಾಳಜಿ ಇತ್ತು. ಅದಕ್ಕಾಗಿಯೇ ಅವರಿಂದ ವಿದ್ಯೆ ಕಲಿತ ವಿದ್ಯಾರ್ಥಿಗಳ ಪಾಲಿಗೆ ಅವರು ಕೇವಲ ಶಿಕ್ಷಕರಾಗಿ ಉಳಿಯದೆ, ಬದುಕು ರೂಪಿಸಿದ ಗುರುವಾಗಿ ಹೃದಯದಲ್ಲಿ ನೆಲೆಸಿದ್ದಾರೆ. ಇಂದು ಅವರ ಶಿಷ್ಯ ಬಳಗ ಒಂದಾಗಿ ಸೇರಿ ಗುರುಸ್ಮರಣೆ ಕಾರ್ಯಕ್ರಮ ಆಯೋಜಿಸಿರುವುದು, ಗುರುವಿನ ಮೇಲಿನ ಶಿಷ್ಯರ ಪ್ರೀತಿ ಮತ್ತು ಕೃತಜ್ಞತೆಗೆ ಸಾಕ್ಷಿಯಾಗಿದೆ. ಎಚ್.ಟಿ.ಕುಲಕರ್ಣಿ ಸರ್ ಅವರು ತಮ್ಮ ಶಿಷ್ಯರ ಬದುಕಿನಲ್ಲಿ ಬೆಳಗಿಸಿದ ಜ್ಞಾನದ ದೀಪ, ಅವರ ಜೀವನದ ದಾರಿಯಲ್ಲಿ ಸದಾ ಬೆಳಕು ಚೆಲ್ಲುತ್ತಲೇ ಇರಲಿ ಎಂಬುದು ಶಿಷ್ಯ ಬಳಗದ ಆಶಯ. ಅವರ ಸೇವೆ ಮತ್ತು ಸ್ಮರಣೆ ಮುಂದಿನ ಪೀಳಿಗೆಗಳಿಗೂ ಗುರು-ಶಿಷ್ಯ ಸಂಬಂಧದ ಅಮೂಲ್ಯ ಮಾದರಿಯಾಗಿ ಉಳಿಯಲಿ ಎಂದರು.
ಈ ವೇಳೆ ಗುರು ಸ್ಮರಣೆಯ ನಿಮಿತ್ಯ ವಿಜಯಪುರ ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಜರುಗಿದ ದೇಹದಾನ, ಅಂಗಾಗಗಳ ದಾನ ಹಾಗೂ ನೇತ್ರದಾನ ಶಿಬಿರದಲ್ಲಿ ಹಮ್ಮಿಕೊಳ್ಳಲಾಯಿತು. ಅದರಲ್ಲಿ ೩೦ಕ್ಕೂ ಅಧಿಕ ಜನ ದೇಹದಾನ, ೨೦ಕ್ಕೂ ಅಧಿಕ ನೇತ್ರದಾನ, ೧೦ಕ್ಕೂ ಅಧಿಕ ಜನ ಅಂಗಾಗಗಳನ್ನು ದಾನ ಮಾಡಿದರು. ತಾಲೂಕು ಸಾರ್ವಜನಿಕರ ಆಸ್ಪತ್ರೆಯ ಸಹಯೊಗದಿಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ೮೭ಕ್ಕೂ ಅಧಿಕ ಗುರುಗಳ ಶಿಷ್ಯ ಬಳಗ ಹಾಗೂ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರದರು.
ಈ ವೇಳೆ ಸಿಂದಗಿ ನಗರದಲ್ಲಿ ಗರುಗಳ ಹೆಸರು ಶಾಶ್ವತವಾಗಿ ಚಿರಸ್ಥಾಯಿಯಾಗಿ ಉಳಿಯುವಂತೆ ಅವರ ಶಿಷ್ಯ ಬಳಗದ ವತಿಯಿಂದ ಸ್ಮಾರಕ ಭವನ ಹಾಗೂ ಸೋಂಪುರ ರಸ್ತೆಗೆ ಅವರ ಹೆಸರು ನಾಮಕರಣ ಮಾಡುವಂತೆ ಶಾಸಕ ಅಶೋಕ ಮನಗೂಳಿ ಅವರಿಗೆ ಮನವಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಅವರ ಶಿಷ್ಯರಾದ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ದಯಾನಂದ ಅಲ್ಲಾಪೂರ, ಡಾ.ನಾಗರಾಜ ನಾಡಗೌಡ, ಡಾ.ವಿಜಯಲಕ್ಷ್ಮಿ ಅವಟಿ, ಹಣಮಂತರಾಯ ಬಿರಾದಾರ ಸೇರಿದಂತೆ ಇತರರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಾತಃಸ್ಮರಣೀಯ ಎಚ್.ಟಿ.ಕುಲಕರ್ಣಿ ಗುರುಗಳ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಪೂಜ್ಯರು ಹಾಗೂ ಗಣ್ಯರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಸಾರಂಗಮಠದ ಪೀಠಾಧ್ಯಕ್ಷರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹಾಗೂ ಊರಿನ ಹಿರಿಯಮಠದ ಶಿವಾನಂದ ಶಿವಾಚಾರ್ಯರು ಆಶೀರ್ವಚನ ನೀಡಿದರು. ಗುರುಗಳ ಸಹೋದರ ಬಿ.ಟಿ.ಕುಲಕರ್ಣಿ ಹಾಗೂ ಸುಪುತ್ರ ಪವನ ಕುಲಕರ್ಣಿ ವೇದಿಕೆಯ ಮೇಲಿದ್ದರು. ಡಾ.ಜಗದೇವಿ ನಂದಿಕೋಲ ಸ್ವಾಗತಿಸಿದರು. ಗುರುರಾಜ ಪಡಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಬಿ.ಅಲ್ದಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಹಾಂತೇಶ ನೂಲಾನವರ, ಡಾ.ವಿಜಯಲಕ್ಷ್ಮಿ ಅವಟಿ, ಡಾ.ಮಂಜುಳಾ ಲೋಣಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಮಲ್ಲೇದ, ಸುಭಾಸ ಪಾಟೀಲ, ಗುರನಾಥ ರೊಟ್ಟಿ, ರಾಜು ಬೋರಗಿ, ಹೀರಾಸಿಂಗ ರಜಪೂತ, ರೇಣುಕಾ ಪಟ್ಟಣಶೆಟ್ಟಿ, ಸಂತೋಷ ಮಣಿಗಿರಿ, ಸಂತೋಷ ಹರನಾಳ, ಡಾ.ಪ್ರಶಾಂತ ಬಮ್ಮಣ್ಣಿ, ಸೇರಿದಂತೆ ಗುರುಗಳ ಶಿಷ್ಯ ಬಳಗ ಇದ್ದರು.

